Advertisement

ಮನಪಾ ವಿಶೇಷ ಸಾಮಾನ್ಯ ಸಭೆ

10:30 AM Jan 18, 2018 | Team Udayavani |

ಮಹಾನಗರ: ಪಾಲಿಕೆಯ ಮುಂದಿನ 30 ವರ್ಷಗಳ ಅಗತ್ಯಗಳಿಗೆ ಆವಶ್ಯಕವಾಗುವ ಹಿನ್ನೆಲೆಯಲ್ಲಿ ಅಮೃತ್‌
ಯೋಜನೆಯಡಿ 123 ಕೋ.ರೂ.ಗಳ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆ ಹಾಗೂ ಎಡಿಬಿ ಎರಡನೇ ಹಂತದಲ್ಲಿ 67 ಕೋ.ರೂ.ಗಳ ಒಳಚರಂಡಿ ಕಾಮಗಾರಿ ಯೋಜನೆಗೆ ಬುಧವಾರ ಮಂಗಳೂರು ಮಹಾನಗರ
ಪಾಲಿಕೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿಪಕ್ಷದ ಆಕ್ಷೇಪದ ಮಧ್ಯೆ ಅನುಮೋದನೆ ನೀಡಲಾಯಿತು.

Advertisement

ಅಪರಾಹ್ನ ಮೂರು ಗಂಟೆಗೆ ಆರಂಭವಾದ ಸಭೆಯು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ಹಾಗೂ ವಾಗ್ವಾದದ ಮಧ್ಯೆ ಕೊನೆಯಲ್ಲಿ ಅನುಮೋದನೆ ಕಾಣುವ ಮೂಲಕ ಸಂಜೆ 6ರ ಸುಮಾರಿಗೆ ಮುಕ್ತಾಯ ಕಂಡಿತು.

ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ಪಾಲಿಕೆ ವಿಶೇಷ ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಮನಪಾ ವಿಪಕ್ಷ ನಾಯಕ ಗಣೇಶ ಹೊಸಬೆಟ್ಟು ಅವರು, ಗೊತ್ತು ಗುರಿ ಇಲ್ಲದ ಯೋಜನೆಯಂತೆ ಇದನ್ನು ಮಾಡಲಾಗಿದೆ. ಅಮೃತ್‌ ಯೋಜನೆಯ ಹಣವನ್ನು ಅದರ ಬಳಕೆಗೆ ನೀಡುವ ಬದಲು ಇತರ ಬಳಕೆಗೆ ನೀಡಲಾಗಿದೆ. ಅಮೃತ್‌ ಯೋಜನೆಯಲ್ಲಿ ಪ್ರತ್ಯೇಕ ಕೆಲಸವನ್ನು ನಡೆಸಬೇಕಾಗಿತ್ತು. ಇತರ ಪಾಲಿಕೆಯಲ್ಲಿ 4ನೇ ಹಂತದ ಮುಖ್ಯಮಂತ್ರಿ 100 ಕೋ.ರೂ. ಅನುದಾನ ಬಂದಿದ್ದರೆ, ಮಂಗಳೂರು ಪಾಲಿಕೆಯಲ್ಲಿ ಇನ್ನೂ 3ನೇ ಹಂತದ ಹಣದ ಬಗ್ಗೆ ಲೆಕ್ಕವೇ ಸಿಗುತ್ತಿಲ್ಲ. ಕುಡ್ಸೆಂಪು ಮೊದಲ ಯೋಜನೆಯೇ ವಿಫಲವಾಗಿರುವಾಗ ಎರಡನೇ ಹಂತದಲ್ಲಿ ಎಡಿಬಿ ಸಾಲ ತೆಗೆದು ಯೋಜನೆ ಮಾಡುವುದಾದರೂ ಯಾಕೆ ಎಂದು ಹೇಳಿದರು .

ಸದಸ್ಯರ ದಾರಿ ತಪ್ಪಿಸಲಾಗುತ್ತಿದೆ
ಬಿಜೆಪಿ ಮುಖಂಡರಾದ ಸುಧೀರ್‌ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ವಿಜಯ್‌ ಕುಮಾರ್‌ ಶೆಟ್ಟಿ, ರೂಪಾ
ಡಿ. ಬಂಗೇರಾ ಮಾತನಾಡಿ, ಅಮೃತ್‌ ಯೋಜನೆಯ ಹಣವನ್ನು ಸ್ವಲ್ಪ ಸ್ವಲ್ಪವೇ ಹಂಚಿಕೆ ಮಾಡುವ ಮೂಲಕ ಸದಸ್ಯರನ್ನು ದಾರಿ ತಪ್ಪಿಸಲಾಗುತ್ತಿದೆ. ಮೊದಲೇ ಎಡಿಬಿ ಮೊದಲ ಹಂತದ ಸಾಲ ಇನ್ನೂ ಮುಗಿದಿಲ್ಲ. ಅದರ ಪಾವತಿ ಆಗುತ್ತಿದೆಯೇ ಎಂಬುದು ಕೂಡ ಗೊತ್ತಿಲ್ಲ. ಇದೆಲ್ಲದರ ಮಧ್ಯೆ ಇದೀಗ ಎರಡನೇ ಹಂತದಲ್ಲಿ ಎಡಿಬಿ ಸಾಲ ಪಡೆದು ಯೋಜನೆ ಮಾಡುವ ಆವಶ್ಯಕತೆ ಏನು? ಮೊದಲ ಎಡಿಬಿ ಯೋಜನೆಯಲ್ಲಿ ಮಾಡಿದ ಕಾಮಗಾರಿ ಇನ್ನೂ ಕೂಡ ಸರಿಯಾಗದೆ, ಅನೇಕ ರೀತಿಯ ಲೋಪದಿಂದ ಮಂಗಳೂರು ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಕೈಗೊಂಡ ಯೋಜನೆಯಡಿ ಬಹುತೇಕ ಕಾಮಗಾರಿಗಳು ಆಡಳಿತ ಪಕ್ಷದವರ ವ್ಯಾಪ್ತಿಯಲ್ಲಿಯೇ ಜಾರಿಯಾಗುತ್ತಿದೆ ಎಂದು ಆರೋಪಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ
2025ರ ಅನ್ವಯ ಎಡಿಬಿ ಮೊದಲ ಯೋಜನೆ ತರಲಾಗಿತ್ತು. ಆದರೆ, ಈಗಲೂ ಈ ಯೋಜನೆಯಿಂದ ಸಮಸ್ಯೆಗಳಾಗಿ
ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಹೊಸ ಪೈಪ್‌ಲೈನ್‌ ಅಳವಡಿಕೆ ಮಾಡದೆ, ಹೊಸ ಯೋಜನೆಯನ್ನೇ
ಮಾಡದೆ, ಹಳೆಯ ಕಾಮಗಾರಿಯಲ್ಲಿ ಆದ ತಪ್ಪುಗಳನ್ನು ಸರಿಪಡಿಸಲು ಮಾತ್ರ ಉದ್ದೇಶಿಸಿರುವುದು ಸರಿಯಲ್ಲ. ಮಿಸ್‌
ಲಿಂಕ್‌ಗೆ ಇಡಲಾಗುವ ಹಣದ ಬದಲಾಗಿ ಮೊದಲ ಕಾಮಗಾರಿಯಲ್ಲಿ ಆದ ತಪ್ಪುಗಳ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಉಪಮೇಯರ್‌ ರಜನೀಶ್‌ ಕಾಪಿಕಾಡ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಅಬ್ದುಲ್‌ ರವೂಫ್‌, ನಾಗವೇಣಿ, ಪ್ರತಿಭಾ ಕುಳಾಯಿ, ಆಯುಕ್ತ ಮೊಹಮ್ಮದ್‌ ನಝೀರ್‌ ಉಪಸ್ಥಿತರಿದ್ದರು.

Advertisement

ಆಡಳಿತ ಪಕ್ಷ; ಪ್ರತ್ಯಾರೋಪ
ಮನಪಾ ಆಡಳಿತ ಪಕ್ಷದ ಸದಸ್ಯರಾದ ದೀಪಕ್‌ ಪೂಜಾರಿ ಮಾತನಾಡಿ, ಮಿಸ್ಸಿಂಗ್‌ ಲಿಂಕ್‌ ಹಂತವನ್ನು ಈ ಯೋಜನೆಯಡಿ ಟೆಂಡರ್‌ ಕರೆಯಲಾಗಿದೆಯೇ? ಅದು ಅಮೃತ್‌ ಯೋಜನೆಯಲ್ಲಿ ತೆಗೆದುಕೊಳ್ಳಲಾಗಿದೆಯೇ? ಹಾಗೂ ಇಲ್ಲಿಯವರೆಗೆ ಪಾಲಿಕೆ ಸದಸ್ಯರ ಗಮನಕ್ಕೆ ತಾರದೆ, ಯೋಜನೆ ಅನುಮೋದನೆ ಪಡೆಯುವ ಹಂತದಲ್ಲಿ ಆಗುವಾಗ ಮಾತ್ರ ಸದಸ್ಯರ ಗಮನಕ್ಕೆ ತಂದಿದ್ದು ಯಾಕೆ ಎಂದು ಪ್ರಶ್ನಿಸಿದರು. ಮಹಮ್ಮದ್‌ ಮಾತನಾಡಿ, ಈ ಯೋಜನೆಯಲ್ಲಿ ಕೆಲವು ರೀತಿಯ ಸಂದೇಹವಿದೆ. ಹೀಗಾಗಿ ಇದರ ಬಗ್ಗೆ ಪೂರ್ಣ ವಿವರಗಳನ್ನು ಸಂಬಂಧಪಟ್ಟವರು ನೀಡಬೇಕು ಎಂದು ಒತ್ತಾಯಿಸಿದರು. ಮಾಜಿ ಮೇಯರ್‌ ಹರಿನಾಥ್‌ ಮಾತನಾಡಿ, ಸ್ವಚ್ಛ ನಗರವಾಗಿ ಮಂಗಳೂರನ್ನು ಪರಿವರ್ತಿಸಲು ಅಮೃತ್‌ ಯೋಜನೆಯನ್ನು ಪರಿಗಣಿಸಲಾಗಿದೆ. ಇಲ್ಲಿ ಕುಡ್ಸೆಂಪ್‌ ಕೆಲಸ ಆಗಿದ್ದರೂ, ಮ್ಯಾನ್‌ಹೋಲ್‌ ಸರಿ ಇಲ್ಲ ಎಂಬ ಆರೋಪವಿದೆ. ಹೀಗಾಗಿ ಒಳಚರಂಡಿ ವ್ಯವಸ್ಥೆ ಸುಧಾರಣೆ ಆಗಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next