Advertisement

ಅಪಾರ್ಟ್‌ಮೆಂಟ್‌ ತ್ಯಾಜ್ಯ ಮಡಕೆಯಲ್ಲಿಯೇ ನಿರ್ವಹಣೆ!

11:14 PM Feb 11, 2020 | mahesh |

ಮಹಾನಗರ: ನಗರದ ಅಪಾರ್ಟ್‌ ಮೆಂಟ್‌ಗಳಲ್ಲಿ ಉತ್ಪತ್ತಿಯಾಗುವ ಹಸಿತ್ಯಾಜ್ಯವನ್ನು ಮಡ ಕೆಯಲ್ಲಿಯೇ ನಿರ್ವಹಣೆ ಮಾಡುವ ವಿನೂತನ ಪರಿಕಲ್ಪನೆಯನ್ನು ರಾಮಕೃಷ್ಣ ಮಿಷನ್‌ ಕಂಡುಕೊಂಡಿದ್ದು, ಇದಕ್ಕಾಗಿ, ಮಂಗಳೂರಿನಲ್ಲಿ “ಮಂಗಳಾ ಸಂಪನ್ಮೂಲ ನಿರ್ವಹಣಾ ಸಂಸ್ಥೆ’ ಎಂಬ ಪ್ರತ್ಯೇಕ ಸ್ಟಾರ್ಟ್‌ ಅಪ್‌ ಆರಂಭಿಸಿದೆ.

Advertisement

ಮಂಗಳವಾರ ರಾಮಕೃಷ್ಣ ಮಿಷನ್‌ನಲ್ಲಿ ಈ ಕುರಿ ತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಷನ್‌ನ ಸಂಚಾಲಕರಾದ ಶ್ರೀ ಏಕಗಮ್ಯಾನಂದ ಸ್ವಾಮೀಜಿ, ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ತ್ಯಾಜ್ಯ ನಿರ್ವಹಿಸಲು ಸ್ವತ್ಛ ಮಂಗಳೂರು ಕಾರ್ಯಕರ್ತರು ಈ ಸ್ಟಾರ್ಟ್‌ ಅಪ್‌ ಆರಂಭಿಸಿದ್ದಾರೆ. ಇದಕ್ಕಾಗಿ ಮೊದಲ ಹಂತದಲ್ಲಿ ನಗರಗಳ ಅಪಾರ್ಟ್‌ಮೆಂಟ್‌ಗಳ ಹಸಿತ್ಯಾಜ್ಯವನ್ನು ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಅವರವರೇ ಮಡಕೆ ಮೂಲಕ ನಿರ್ವಹಿಸುವುದು ಈ ಯೋಜನೆಯ ಉದ್ದೇಶ. ಮಂಗಳೂರು ಪಾಲಿಕೆಯವರು ಅಪಾರ್ಟ್‌ಮೆಂಟ್‌, ಹೊಟೇಲ್‌, ಹಾಸ್ಟೆಲ್‌ ಸಹಿತ ಅಧಿಕ ತ್ಯಾಜ್ಯ ಉತ್ಪಾದಿಸುವವರಿಗೆ ಸ್ವಂತ ತ್ಯಾಜ್ಯ ಸಂಸ್ಕರಣಾ ವಿಧಾನಗಳನ್ನು ಅಳವಡಿಸುವಂತೆ ಆದೇಶ ನೀಡಿದೆ. ಅಂತಹ ಸಂಸ್ಥೆಗಳಿಗೆ ಈ ಹೊಸ ಸ್ಟಾರ್ಟ್‌ ಅಪ್‌ ಸಹಾಯ ಮಾಡಲಿದೆ ಎಂದರು. ಪ್ರಾಯೋಗಿಕವಾಗಿ ಕೆಲವು ತಿಂಗಳಿನಿಂದ ನಗರದ ಎರಡು ಅಪಾರ್ಟ್‌ಮೆಂಟ್‌ಗಳಲ್ಲಿ ಈ ಕಾರ್ಯ ಈಗಾಗಲೇ ಚಾಲನೆಯಲ್ಲಿದೆ ಎಂದರು.

ತ್ಯಾಜ್ಯ ಮುಕ್ತ ಅಪಾರ್ಟ್‌ ಮೆಂಟ್‌ ಹೇಗೆ?
ಅಪಾರ್ಟ್‌ಮೆಂಟ್‌ನಲ್ಲಿರುವ ಪ್ರತಿ ಮನೆಗೂ ಉಚಿತವಾಗಿ 2,000 ರೂ. ಮೌಲ್ಯದ ಮಣ್ಣಿನ ಮಡಕೆ, ಇದರೊಂದಿಗೆ ಹಸಿತ್ಯಾಜ್ಯ ಹಾಕಲು 400 ರೂ. ಮೌಲ್ಯದ 2 ಕಸದ ಬುಟ್ಟಿ ನೀಡಲಾಗುತ್ತದೆ. ಪ್ರತೀದಿನ ಸ್ಟಾರ್ಟ್‌ ಅಪ್‌ ಸಂಸ್ಥೆಯ ಓರ್ವರು ಪ್ರತೀ ಅಪಾರ್ಟ್‌ಮೆಂಟ್‌ಗೆ ಹೋಗಿ ಕಸವನ್ನು ಮಡಿಕೆ ಗಳಿಗೆ ಹಾಕಿ, ತೆಂಗಿನನಾರು ಹಾಕಿ ಗೊಬ್ಬರ ತಯಾರಿಸುತ್ತಾರೆ. ಅಪಾರ್ಟ್‌ಮೆಂಟ್‌ನ ಪ್ರತಿಯೊ ಬ್ಬರೂ ಅವರ ವಾಹನ ಪಾರ್ಕಿಂಗ್‌ ಹತ್ತಿರದ ಕಂಬ ಅಥವಾ ಅಲ್ಲಿಯೇ ಸೂಕ್ತ ಸ್ಥಳದಲ್ಲಿ ಮಣ್ಣಿನ ಮಡಕೆಗಳನ್ನು ಇರಿಸಬೇಕು. ಪ್ರತಿದಿನ ಬೆಳಗ್ಗೆ ಕಿಚನ್‌ ವೇಸ್ಟ್‌ ಅಥವಾ ಹಸಿತ್ಯಾಜ್ಯ ( ಪ್ಲಾಸ್ಟಿಕ್‌ ಸೇರಿಸಬಾರದು) ಕಸದ ಬುಟ್ಟಿಯಲ್ಲಿ ತಂದಿರಿ ಸಬೇಕು. ಖಾಲಿ ಬುಟ್ಟಿ ತೆಗೆದುಕೊಂಡು ಹೋಗ ಬೇಕು. ಕಸವನ್ನು ಸ್ಟಾರ್ಟ್‌ ಅಪ್‌ ಸಂಸ್ಥೆಯ ಜನರು ಮಡಕೆಗೆ ಹಾಕಿ ನಿರ್ವಹಣೆ (ಮನೆಯವರು ಮಡ ಕೆಗೆ ಹಾಕಿ ನಿರ್ವಹಿಸುವ ಕೆಲಸವಿಲ್ಲ)ಮಾಡುತ್ತಾರೆ.

ಯೋಜನೆಗಾಗಿ ಪ್ರತಿ ಮನೆಯವರು ಆರಂಭಿಕ ಶುಲ್ಕ ನೀಡಬೇಕಿಲ್ಲ. ಆದರೆ ಮೂರು ವರ್ಷಗಳ ಒಪ್ಪಂದ ಮಾಡಿಕೊಳ್ಳಬೇಕಿದೆ. 1,000 ರೂ. ಠೇವಣಿ ಯನ್ನು ನೀಡಬೇಕು. ಮೂರು ವರ್ಷಗಳ ಬಳಿಕ ಅದನ್ನು ಮರಳಿಸಲಾಗುವುದು. ಪ್ರತಿ ಮನೆಯವರೂ ದಿನಕ್ಕೆ 5 ರೂ.ನಂತೆ 150 ರೂ. ಶುಲ್ಕವನ್ನು ಕಾರ್ಮಿಕರಿಗಾಗಿ ನೀಡಬೇಕಾಗುತ್ತದೆ. ವೈಯಕ್ತಿಕವಾಗಿ ನೀಡದೆ ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ ಮೂಲಕ ಇದನ್ನು ಸಂಗ್ರಹಿಸಲಾಗುವುದು ಎಂದರು.

ಈಗಾಗಲೇ ನಗರದ ಪ್ರತ್ಯೇಕ ಮನೆಗಳಿಗೆ ಸುಮಾರು 4,700 ಜನರು ಮಣ್ಣಿನ ಮಡಕೆಗೆ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 2,800 ಮನೆಗಳಿಗೆ ಮಡಕೆ ವಿತರಣೆ ಆಗಿದೆ. ಉಳಿದಂತೆ ಮಡಕೆಗಳ ಖರೀದಿ ಕೆಲಸ ಆಗಬೇಕಿದೆ. ಪೆರ್ಡೂರು, ಕುಣಿಗಲ್‌, ಅನಂತಪುರ, ಬಳ್ಳಾರಿಯಿಂದ ಮಡಕೆ ತರಿಸಲಾಗುವುದು. ಶೀಘ್ರದಲ್ಲಿ ಲೈಟ್‌ಹೌಸ್‌ ಹಿಲ್‌ ರಸ್ತೆಯಲ್ಲಿ ಕಚೇರಿ ಆರಂಭವಾಗಲಿದೆ ಎಂದರು. ಸ್ವತ್ಛತಾ ಆಂದೋನದ ಸಂಚಾಲಕರಾದ ರಮಾನಾಥ ಕೋಟೆಕಾರ್‌, ದಿಲ್‌ರಾಜ್‌ ಆಳ್ವ, ಸಚಿನ್‌ ಉಪಸ್ಥಿತರಿದ್ದರು.

Advertisement

ವಿಶೇಷತೆಯೇನು?
ಮಡಕೆ ಮೂಲಕ ಮನೆಯಲ್ಲಿಯೇ ತ್ಯಾಜ್ಯ ನಿರ್ವಹಿಸುವುದು ನೈಸರ್ಗಿಕ ವಿಧಾನ. ಇಲ್ಲಿ ಯಾವುದೇ ಯಂತ್ರದ ಸಹಾಯವಿಲ್ಲ ಹಾಗೂ ಆರಂಭಿಕ ಬಂಡವಾಳವೂ ಕಡಿಮೆ. ಅಧಿಕ ವಿದ್ಯುತ್‌ ಅಥವಾ ಇತರೇ ಇಂಧನಗಳು ಬೇಡ. ಮಾಲಿನ್ಯವೂ ಇಲ್ಲ. ಯಂತ್ರಗಳ ಬಳಕೆ ಇಲ್ಲದ ಕಾರಣ ನಿರ್ವಹಣಾ ಶುಲ್ಕ, ತಜ್ಞರ ಅಗತ್ಯ ಬೇಡ. ಮಡಕೆಗಳ ಮೂಲಕ ಕುಂಬಾರರಿಗೂ ಕೆಲಸ ಸಿಕ್ಕಿ ಪ್ರೋತ್ಸಾಹ ನೀಡಿದಂತಾಗುತ್ತದೆ. ತ್ಯಾಜ್ಯದ ಸಾಗಾಟವಿಲ್ಲ ಹಾಗೂ ಇಂಧನ ಉಳಿತಾಯವಾಗಲಿದೆ ಎನ್ನುತ್ತಾರೆ ಶ್ರೀ ಏಕಗಮ್ಯಾನಂದ ಸ್ವಾಮೀಜಿ.

Advertisement

Udayavani is now on Telegram. Click here to join our channel and stay updated with the latest news.

Next