Advertisement

ಈಗಿರುವ ನೀರಿನಲ್ಲಿ ಈ ಬೇಸಗೆ ನಿರ್ವಹಣೆ ಸಾಧ್ಯವೇ ಇಲ್ಲ !

03:45 AM Feb 20, 2017 | |

ನಗರ: ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿರುವ ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಈ ಬೇಸಗೆ ಸ್ವಲ್ಪ ಕಠಿನವಾಗಿರಲಿದ್ದು, ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣ ಹಾಗೂ ವಿಧಾನಗಳಿಂದ ಕುಡಿಯುವ ನೀರಿನ ನಿರ್ವಹಣೆ ಅಸಾಧ್ಯ ಎಂಬ ವರದಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ.

Advertisement

ಎರಡೂ ತಾಲೂಕುಗಳಲ್ಲಿರುವ ಜಲ ಸಂಗ್ರಹ ಮತ್ತು ಜಲ ಸಂಪನ್ಮೂಲಗಳ ತಾಜಾ ಸ್ಥಿತಿ ಕುರಿತು ಜಿಲ್ಲಾಡಳಿತ ಸಿದ್ಧಪಡಿಸಿರುವ ವರದಿ ಪ್ರಕಾರ ಪ್ರಸ್ತುತ ಜಲಮೂಲಗಳಿಂದ ಲಭ್ಯವಿರುವ ನೀರಿನಿಂದ ಈ ಬೇಸಗೆಯನ್ನು ನಿರ್ವಹಿಸಲಾಗದು. ಹಾಗಾಗಿ ಬೇರೆ ಯಾವುದಾದರೂ ಜಲ ಮೂಲಗಳ, ವಿಧಾನಗಳ ಮೊರೆ ಹೋಗುವುದು ಅನಿವಾರ್ಯ ಎಂದೂ ಉಲ್ಲೇಖೀಸಲಾಗಿದೆ.

ಸಮಾಧಾನಕರ ಅಂಶವೆಂದರೆ, ಜಿಲ್ಲಾಡಳಿತ ಪರಿಹಾರ ಮೂಲಗಳನ್ನು ಪತ್ತೆ ಹಚ್ಚಲು ಕಾರ್ಯೋ ನ್ಮುಖವಾಗಿದೆ. ಈ ಸಂಬಂಧ ಸರಕಾರದ ಮೊರೆ ಹೋಗಲೂ ತೀರ್ಮಾನಿಸಿದೆ. ಕುಡಿಯುವ ನೀರಿನ ನಿರ್ವಹಣೆಯೇ ಬಹುದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

ಹಿಂದಿನಂತೆ ಇರಲಾರದು
ಕರಾವಳಿಯ ಇತಿಹಾಸದಲ್ಲಿ ಅಪರೂಪಕ್ಕೆಂಬಂತೆ ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಸರಕಾರ ಬರಪೀಡಿತ ಪಟ್ಟಿಗೆ ಸೇರಿಸಿದೆ. ಆದ ಕಾರಣ, ಎರಡೂ ತಾಲೂಕಿನಲ್ಲಿ ವಿಶೇಷ ಆಸ್ಥೆಯಿಂದ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ ಕುಡಿಯುವ ನೀರು ಆವಶ್ಯಕತೆ ಮತ್ತು ವಿತರಣೆ ಮಧ್ಯೆ ಬಹಳಷ್ಟು ಅಂತರ ಇರುವುದೇ ಈಗ ಸಮಸ್ಯೆಯಾಗಿದೆ. ಇಷ್ಟೊಂದು ಪ್ರಮಾಣದ ಕೊರತೆಯನ್ನು ನೀಗಿಸಲು ಲಭ್ಯ ಮೂಲಗಳಿಂದ ಸಾಧ್ಯವಾಗದ ಸ್ಥಿತಿ ಉದ್ಭವಿಸಿದೆ.

ಮಂಗಳೂರು ತಾಲೂಕಿನ ಕಥೆ
ಉಳ್ಳಾಲ ನಗರಸಭೆಯ 27 ವಾರ್ಡ್‌ಗಳ ಪೈಕಿ 12, ಬಂಟ್ವಾಳ ಪುರಸಭೆಯ 23ರ ಪೈಕಿ 9, ಮೂಲ್ಕಿ 17ರಲ್ಲಿ 17, ಕೋಟೆಕಾರ್‌ ನ.ಪಂ. 17ರಲ್ಲಿ 11 ಹಾಗೂ ವಿಟ್ಲ  ನಗರ ಪಂಚಾಯತ್‌ನ 18 ವಾರ್ಡ್‌ ಗಳ ಪೈಕಿ 16 (ಭಾಗಶಃ) ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸ್ಥಳಗಳಾಗಿದ್ದು, ಇಲ್ಲಿ ಎಚ್ಚೆತ್ತುಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ.

Advertisement

ಉಳ್ಳಾಲ ನಗರಸಭೆಗೆ ಮಂಗಳೂರು ಪಾಲಿಕೆಯಿಂದ 3 ಎಂಎಲ್‌ಡಿ ನೀರಿನ ಬದಲು ಪ್ರತಿ ದಿನ 1.5 ಎಂಎಲ್‌ಡಿ ಮಾತ್ರ ಪೂರೈಕೆಯಾಗುತ್ತಿದೆ. ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ 70 ಕೊಳವೆಬಾವಿ ಹಾಗೂ 6 ತೆರೆದ ಬಾವಿಗಳಿಂದ ನೀರು ಸರಬರಾಜು ಮಾಡುತ್ತಿದ್ದು, ಮುಂದಿನ ದಿನದಲ್ಲಿ ಇಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಒಟ್ಟು ಸದ್ಯ ಇಲ್ಲಿ 3.6 ಎಂಎಲ್‌ಡಿ ನೀರು ವಿತರಣೆಯಾಗುತ್ತಿದ್ದು, 7.26 ಎಂಎಲ್‌ಡಿ ನೀರಿನ ಆವಶ್ಯಕತೆ ಇದೆ.

ಬಂಟ್ವಾಳ ಪುರಸಭೆಗೆ ನದಿ, ಬೋರ್‌ವೆಲ್‌, ಸಮಗ್ರ ನೀರು ಸರಬರಾಜು ಮತ್ತು ಕಿರು ನೀರು ಸರಬರಾಜು ಯೋಜನೆಯಿಂದ 5.42 ಎಂಎಲ್‌ ಡಿ ಬೇಡಿಕೆಗೆ 4.80 ಎಂಎಲ್‌ಡಿ ನೀರು ವಿತರಣೆಯಾಗುತ್ತಿದೆ. ಮೂಡಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ನದಿ ಹಾಗೂ 124 ಕೊಳವೆಬಾವಿಗಳು ನೀರಿನ ಮೂಲವಾಗಿದ್ದು, ಫ‌ಲ್ಗುಣಿ ನದಿಯಿಂದ 3 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. 124 ಕೊಳವೆ ಬಾವಿಗಳಿಂದ 1.2 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. 

ಇಲ್ಲಿ 4.2 ಎಂಎಲ್‌ಡಿ ಬದಲು 4 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಮೂಲ್ಕಿ ನಗರ ಪಂಚಾಯತ್‌ಗೆ ತೆರೆದ ಬಾವಿ, ಬೋರ್‌ವೆಲ್‌ ಮತ್ತು ಮನಪಾದಿಂದ (ಒಟ್ಟು 20 ತೆರೆದ ಬಾವಿ, 22 ಕೊಳವೆ ಬಾವಿಗಳು) 2.10 ಎಂಎಲ್‌ ಡಿ ಬದಲು 1.5 ಎಂಎಲ್‌ಡಿ ನೀರು ವಿತರಣೆಯಾಗುತ್ತಿದೆ.

ಕೋಟೆಕಾರು ನಗರ ಪಂಚಾಯತ್‌ಗೆ ಕೊಳವೆ ಬಾವಿ(45), ತೆರೆದ ಬಾವಿ(8) ಮೂಲಕ 2.23 ಎಂಎಲ್‌ಡಿಗೆ ಪೂರಕವಾಗಿ 1.57 ಎಂಎಲ್‌ಡಿ ನೀರು ವಿತರಿಸಲಾಗುತ್ತಿದೆ. ವಿಟ್ಲ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಕೊಳವೆ ಬಾವಿ (27), ತೆರೆದ ಬಾವಿ (3)ಮೂಲಕ ಕೇವಲ 0.85 ಎಂಎಲ್‌ಡಿ ನೀರು ವಿತರಿಸಲಾಗುತ್ತಿದೆ. ಆದರೆ ಇಲ್ಲಿ ಬೇಡಿಕೆ 2.37 ಎಂಎಲ್‌ಡಿ ಇದೆ.

ಕೊನೆಗೂ ಕೆರೆಗಳೇ ಗತಿ
ಸಂಕಷ್ಟ ಕಾಲದಲ್ಲಿ ಮತ್ತೆ ಕೆರೆಗಳನ್ನು ಜಿಲ್ಲಾಡಳಿತ ನೆನಪಿಸಿಕೊಂಡಿದೆ. ಮಂಗಳೂರು ಹಾಗೂ ಬಂಟ್ವಾಳ ತಾಲೂಕುಗಳಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ ಒಟ್ಟು 61 ಕೆರೆಗಳನ್ನು 1332.85 ಲಕ್ಷ ರೂ. ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಮಂಗಳೂರು ತಾಲೂಕಿನ 19 ಕೆರೆಗಳನ್ನು 545 ಲಕ್ಷ ರೂ ಹಾಗೂ ಬಂಟ್ವಾಳ ತಾಲೂಕಿನ 42 ಕೆರೆಗಳನ್ನು 787.85 ಲಕ್ಷ ರೂ. ಗಳಲ್ಲಿ ಅಭಿವೃದ್ಧಿಪಡಿಸುವುದಾಗಿದೆ. ಇದರ ಜತೆಗೆ ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಮಡಿವಾಳ ಕೆರೆ, ಆನೆಕೆರೆ, ಉಳ್ಳಾಲ ನಗರಸಭೆೆಯ ಕೆರೆಬೈಲ್‌ ಕೆರೆ, ಕೋಟೆಕಾರು ನಗರ ಪಂಚಾಯತ್‌ನ ಕೋಮರಂಗಲ್‌ ಕೆರೆ ಹಾಗೂ ವಿಟ್ಲ ನಗರ ಪಂಚಾಯತ್‌ನ ಕಾಶಿಮಠ ಕೆರೆ ಅಭಿವೃದ್ದಿಪಡಿಸಲು ನಿಧ‌ìರಿಸಲಾಗಿದೆ.

ಮಂಗಳೂರು ಕಥೆ
ಮಂಗಳೂರು ಪಾಲಿಕೆಗೆ ನೇತ್ರಾವತಿ ನದಿಯಿಂದ ತುಂಬೆಯಲ್ಲಿ ಅಣೆಕಟ್ಟು ಮೂಲಕ 160 ಎಂ.ಎಲ್‌.ಡಿ ನೀರನ್ನು ದಿನಂಪ್ರತಿ ಪಂಪಿಂಗ್‌ ಮಾಡಲಾಗುತ್ತಿದೆ. ಇಲ್ಲಿಗೆ ಒಟ್ಟು 7.65 ಎಂ.ಸಿ.ಎಂ ಲಭ್ಯವಿದೆ. ನೀರಿನ ಒಳಹರಿವು ಸದ್ಯಕ್ಕೆ ಇರುವುದರಿಂದ ಸಮಸ್ಯೆಯ ಆಳ ಇನ್ನೂ ಸ್ಟಷ್ಟವಾಗುತ್ತಿಲ್ಲ.ಮಂಗಳೂರು ಪಾಲಿಕೆಯ ಮೂರು ವಾರ್ಡ್‌ ಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯನ್ನು ಪಾಲಿಕೆ ಲೆಕ್ಕಹಾಕಿದ್ದು, ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕುಡಿಯುವ ನೀರಿಗೆ ವಿಶೇಷ ಆದ್ಯತೆ
ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿಗೆ ಬರಪೀಡಿತ ಎಂಬ ಪಟ್ಟ ದೊರಕಿದೆ. ಹೀಗಾಗಿ ಈ ಎರಡೂ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ವಿಶೇಷ ಆದ್ಯತೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಉಳಿದಂತೆ ಎಲ್ಲ ತಾಲೂಕುಗಳ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಲಾಗಿದೆ.

– ಬಿ. ರಮಾನಾಥ ರೈ
ಜಿಲ್ಲಾ ಉಸ್ತುವಾರಿ ಸಚಿವರು.

ಖಾಸಗಿ ಬಾವಿಗಳ ನೀರು ಬಳಕೆಗೆ ಕ್ರಮ
ಎಸ್‌ಎಫ್ಸಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ನಿಧಿಯಿಂದ ಆಯಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಿಗೆ ನೀರು ಪೂರೈಸಲು ಹೊಸದಾಗಿ ಕೊಳವೆಬಾವಿಗಳನ್ನು ಕೊರೆಯಿಸಿ ಸಬ್‌ಮರ್ಸಿಬಲ್‌ ಪಂಪ್‌ಗ್ಳನ್ನು ಅಳವಡಿಸಲಾಗುವುದು.  ಅಗತ್ಯವಿರುವಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಆವಶ್ಯಕವೆನಿಸಿದರೆ ಖಾಸಗಿ ಮಾಲಕತ್ವದ  ಬಾವಿಗಳಿಂದ ನೀರು ಪೂರೈಸಲು ಸೂಚಿಸಲಾಗಿದೆ. 

– ಡಾ | ಕೆ.ಜಿ.ಜಗದೀಶ್‌
ಜಿಲ್ಲಾಧಿಕಾರಿ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next