Advertisement

ಸತ್ವದಿಂದ ಮನಗೆದ್ದಿತು ನೃತ್ಯಾಮೃತಂ

03:47 PM Apr 07, 2017 | |

ನೃತ್ಯ ಕಲಾವಿದ ರಂಗದಲ್ಲಿ ತನ್ಮಯನಾಗಿ ನರ್ತಿಸುತ್ತಾ ಯಥೋಚಿತ ಭಾವಸುರಣವಾಗುವಂತೆ ಅಭಿನಯಿಸಿ, ಪ್ರೇಕ್ಷಕರ ಮನಸ್ಸಿನಲ್ಲಿ ಅತ್ಯಂತಿಕವಾದ ಆನಂದಾಮೃತವನ್ನು ಆಸ್ವಾದಿಸುವ ಭಾವವನ್ನು ಒದಗಿಸಬೇಕಾದದ್ದೇ ಕಲೆಯ ಪರಮ ಉದ್ದೇಶ. ಮಂಗಳೂರಿನ “ಭರತಾಂಜಲಿ ಕೊಟ್ಟಾರ’ ನೃತ್ಯಸಂಸ್ಥೆ ಇತ್ತೀಚೆಗೆ ಆಯೋಜಿಸಿದ ನೃತ್ಯಾಮೃತಂ ಕಾರ್ಯಕ್ರಮ ಇಂತಹ ಒಂದು ಅನುಭವವನ್ನು ನೀಡಿತು. 

Advertisement

ಮೊದಲಿಗೆ ನೃತ್ಯ ಪ್ರದರ್ಶನ ನೀಡಿದ ಬೆಂಗಳೂರಿನ ಮಾತಂಗಿ ಪ್ರಸನ್ನ ಪ್ರಕೃತಿಯ ವಾತ್ಸಲ್ಯ ಹಾಗೂ ಪೋಷಣೆಯ ಕುರಿತಾದ ಆಶಯದ ನೃತ್ಯದೊಂದಿಗೆ ಹೊಸತನದಿಂದ ಕೂಡಿದ ರಾಗಮಾಲಿಕೆ  -ಆದಿತಾಳದ ಸ್ವರಾಂಜಲಿಗೆ ಹೆಜ್ಜೆ ಹಾಕುತ್ತಾ ರಂಗದಲ್ಲಿ ಮಿಂಚು ಹರಿಸಿದರು. ಮುಂದೆ ಪ್ರಭೋ ಗಣಪತೇ ಎಂಬ ತಿಲಂಗ್‌ ರಾಗ, ಆದಿತಾಳದ ನೃತ್ಯದ ಮೂಲಕ ಗಣಪತಿ ವಂದನೆ ಸಲ್ಲಿಸಿದರು. ಬಳಿಕ ಕಲಾವಿದೆ ಪೂರ್ವಿಕಲ್ಯಾಣಿ ರಾಗ, ರೂಪಕ ತಾಳದ ಆನಂದ ನಟ ಮಾಡುವಾರ್‌ ತಿಲೈ ಎಂಬ ಪದಂಗೆ ಕ್ಲಿಷ್ಟಕರ ಲಯವಿನ್ಯಾಸದಿಂದ  ಕೂಡಿದ ಜತಿಗಳ ಸಹಿತ ಚುರುಕಾಗಿ ನರ್ತಿಸಿದರು. ಕೊನೆಗೆ ಬಾರೋ ಕೃಷ್ಣಯ್ಯ ಎಂಬ ರಾಗಮಾಲಿಕೆ, ಆದಿತಾಳದ ಕೀರ್ತನೆಗೆ ಸ್ನೇಹ, ವಾತ್ಸಲ್ಯಮಯ ಮಾತೃಭಾವದಿಂದ ಭಕ್ತೆಯ ರೀತಿಯಲ್ಲಿ ಅಭಿನಯಿಸಿದ್ದು ಚೆನ್ನಾಗಿ ಮೂಡಿಬಂತು. ಇಲ್ಲಿ ತುಂಟ ಕೃಷ್ಣನ ಭಾವಗಳು ಪ್ರೇಕ್ಷಕರ ಮನ ಮುಟ್ಟುವಲ್ಲಿ ಸಫ‌ಲವಾದವು. ಪ್ರಖ್ಯಾತ ನೃತ್ಯ ಗುರು ಕಿರಣ್‌ ಸುಬ್ರಹ್ಮಣ್ಯಂ ಇವರ ಗರಡಿಯಲ್ಲಿ ಪಳಗಿದ ಉದಯೋನ್ಮುಖ ಕಲಾವಿದೆ ಮಾತಂಗಿ ಪ್ರಸನ್ನ ಸೊಗಸಾದ ನೃತ್ಯ ಪ್ರಸ್ತುತಿಯೊಂದಿಗೆ ಭವಿಷ್ಯದಲ್ಲಿ ಭರವಸೆಯ ಕಲಾವಿದೆಯಾಗಿ ಬೆಳೆಯುವ ಲಕ್ಷಣಗಳನ್ನು ತೋರಿದರು.

ಮುಂದೆ ಬೆಂಗಳೂರಿನ ಪ್ರಖ್ಯಾತ ನೃತ್ಯಗುರು ಬಿ. ಭಾನುಮತಿ ಅವರ ನೃತ್ಯಕಲಾ ಮಂದಿರ ತಂಡದ ನೃತ್ಯ ಪ್ರಸ್ತುತಿ ಮನೋಜ್ಞವಾಗಿತ್ತು. ಆರಂಭಿಕ ನೃತ್ಯ ಡಾ| ವೆಂಕಟ ಲಕ್ಷಮ್ಮ ಅವರ ಸಂಯೋಜನೆಯ ತಿಶ್ರ ಅಲರಿಪು, ಗುರು ಭಾನುಮತಿ ಅವರಿಂದ ಸಮೂಹ ನೃತ್ಯಕ್ಕೆ ಅಳವಡಿಸಲ್ಪಟ್ಟದ್ದು, ಆಕರ್ಷಕವಾಗಿ ಮೂಡಿಬಂದು ನೆರೆದ ರಸಿಕರ ಮನ ಸೆಳೆಯಿತು. ಮಾಯಾಮಾಳವಗೌಳ ರಾಗದ ದೇವೀಕೃತಿಯೊಂದಿಗೆ ಮುಂದು ವರಿದ ಕಾರ್ಯಕ್ರಮದ ಅನಂತರದ ಪ್ರಸ್ತುತಿ ಚುರುಕಾದ ಅಭಿನಯದ ಜತೆಗೆ ಚೆನ್ನಾಗಿ ಮೂಡಿ ಬಂತು. ಮುಂದೆ ಗುರು ಬಿ. ಭಾನುಮತಿಯವರು ತುಂಟ ಕೃಷ್ಣನ ಚಿತ್ರಣವನ್ನು, ಯಶೋದೆಯ ಹುಸಿಮುನಿಸನ್ನು ಬಹಳ ಸೊಗಸಾಗಿ ಗುಮ್ಮನ ಕರೆಯದಿರೆ  ದೇವರನಾಮಕ್ಕೆ ಅಭಿನಯಿಸುವ ಮೂಲಕ ಜನಮನ ಸೆಳೆದರು. ಎಪ್ಪತ್ತರ ಹರೆಯದ ಗುರು ಭಾನುಮತಿ ಯವರು ರಂಗದಲ್ಲಿ ಏಳರ ಹರೆಯದ ಕೃಷ್ಣನಾಗಿ ನೀಡಿದ ಅಭಿನಯ ಹೃದ್ಯವಾಗಿತ್ತು. ಮುಂದೆ ಗುರುಗಳು ತಾವೇ ಅಭಿನಯಿಸಿದ ಶ್ರೀ ರಾಮನ ಪೂಜಿಸಲಿಲ್ಲ ಮೈ ಮರೆತನಲ್ಲ ಎಂಬ ಹಾಡಿನಲ್ಲಿ ಲೌಕಿಕ ಪ್ರಪಂಚದಲ್ಲಿ ಪರಮಾತ್ಮನನ್ನು ಮರೆತು ಬದುಕಿದ ಪರಿಯನ್ನು ಅಭಿನಯಿಸಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸಿದರು. ಕೊನೆಯದಾಗಿ ಹನುಮಂತ ದೇವ ನಮೋ  ಎಂಬ ನೃತ್ಯದ ಮೂಲಕ ರಾಮಾಯಣದಲ್ಲಿ ಬರುವ ಹನುಮಂತನ ಪಾತ್ರ ಚಿತ್ರಣವನ್ನು ಬಲು ಸೊಗಸಾಗಿ ಪ್ರಸ್ತುತಪಡಿಸಿದರು. ಇಲ್ಲಿ ಗುರು ಭಾನುಮತಿಯವರು ಹನುಮನಾಗಿ ನೀಡಿದ ಅಭಿನಯ ಅದ್ಭುತ ವಾಗಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂತಿತ್ತು.  ಗುರು ಭಾನುಮತಿ ಅವರ ಶಿಷ್ಯೆಯರೂ ಅಷ್ಟೇ ಸೊಗಸಾದ ಅಂಗಶುದ್ಧಿ ಹಾಗೂ ಮುಖ ಭಾವದೊಂದಿಗೆ ಅಭಿನಯಿಸಿದರು. ನೃತ್ಯಕ್ಕೆ, ನೃತ್ಯಗಾತಿಗೆ ವಯಸ್ಸಿನ ಹಂಗಿಲ್ಲ ಎಂಬಂತೆ ಗುರು ಭಾನುಮತಿಯವರು ಸುಮಾರು ಒಂದು ತಾಸು ಕಾಲ ರಂಗ ಪ್ರಸ್ತುತಿ ನೀಡಿದ್ದು ಅಭಿನಂದನೀಯ. 

ಎರಡೂ ಕಾರ್ಯಕ್ರಮಗಳಲ್ಲೂ ಸತ್ವವೇ ಮೇಳೈಸಿ ಆನಂದ ನೀಡಿತು. ಇಂತಹ ಕಾರ್ಯಕ್ರಮವನ್ನು ಸಂಘಟಿಸಿದ ಭರತಾಂಜಲಿಯ ಶ್ರೀಧರ ಹೊಳ್ಳ, ಪ್ರತಿಮಾ ಶೀಧರ್‌ ದಂಪತಿ ಅಭಿನಂದನಾರ್ಹರು.

ಜಯಲಕ್ಷ್ಮೀ

Advertisement
Advertisement

Udayavani is now on Telegram. Click here to join our channel and stay updated with the latest news.

Next