ವಾಷಿಂಗ್ಟನ್: 1970ರ ದಶಕದಿಂದ 2005ರವರೆಗೆ ದೇಶಾದ್ಯಂತ ಈತ ನಡೆಸಿರುವ ಮಹಿಳೆಯರ ಕೊಲೆಗಳ ಸಂಖ್ಯೆ 90ಕ್ಕೂ ಅಧಿಕ. ಈ ಹಿನ್ನೆಲೆಯಲ್ಲಿ ಈತನನ್ನು ಅಮೆರಿಕದ ಇತಿಹಾಸದಲ್ಲಿಯೇ ಮೋಸ್ಟ್ ಸೀರಿಯಲ್ ಕಿಲ್ಲರ್ ಎಂದು ಪರಿಗಣಿಸಲಾಗಿದೆ ಎಂಬುದಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತಿಳಿಸಿದೆ.
2012ರಿಂದ ಜೈಲು ಕಂಬಿ ಎಣಿಸುತ್ತಿರುವ ಸ್ಯಾಮ್ಯುವೆಲ್ ಲಿಟ್ಲ್ ಎಂಬ ಸರಣಿ ಹಂತಕ ಕಳೆದ ವರ್ಷ ತನಿಖಾಧಿಕಾರಿಗಳ ಮುಂದೆ ತಾನು ದೇಶದಲ್ಲಿ 1970ರಿಂದ 2005ರವರೆಗೆ 90ಕ್ಕೂ ಅಧಿಕ ಮಹಿಳೆಯರ ಕೊಲೆಗಳನ್ನು ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ವರದಿ ಹೇಳಿದೆ.
ಎಫ್ ಬಿಐ ಪ್ರಕಾರ, ಹಂತಕ ಸ್ಯಾಮ್ಯುವೆಲ್ ತಪ್ಪೊಪ್ಪಿಗೆ ಸತ್ಯವಾಗಿದ್ದು, ಈವರೆಗೆ ಎಫ್ ಬಿಐ ಅಧಿಕಾರಿಗಳು ಸುಮಾರು 50ಕ್ಕೂ ಅಧಿಕ ಪ್ರಕರಣಗಳನ್ನು ಪರಿಶೀಲನೆ ನಡೆಸಿರುವುದಾಗಿ ತಿಳಿಸಿದೆ.
ಈತ ಹತ್ಯೆಗೈದವರಲ್ಲಿ ಬಹುತೇಕರು ಮಹಿಳೆಯರೇ ಅಧಿಕ. 79 ವರ್ಷದ ಸ್ಯಾಮ್ಯುವೆಲ್ ಕ್ಯಾಲಿಫೋರ್ನಿಯಾದಲ್ಲಿ ಹಲವು ಜೀವಾವಧಿ ಶಿಕ್ಷೆಗೆ ಒಳಗಾಗಿರುವುದಾಗಿ ಎಫ್ ಬಿಐ ಅಧಿಕಾರಿಗಳು ವಿವರಿಸಿದ್ದಾರೆ.
ಈತನಿಂದ ಕೊಲೆಯಾದ ಸುಮಾರು 30 ಸಂತ್ರಸ್ತರ ರೇಖಾಚಿತ್ರವನ್ನು ಎಫ್ ಬಿಐ ನೀಡಿದೆ. ಸ್ವತಃ ಅಪರಾಧಿಯಾಗಿರುವ ಸ್ಯಾಮ್ಯುವೆಲ್ ಸಂತ್ರಸ್ತರ ಬಣ್ಣದ ರೇಖಾಚಿತ್ರವನ್ನು ಬಿಡಿಸಿರುವುದಾಗಿ ವರದಿ ತಿಳಿಸಿದೆ.