Advertisement

ಮಹಿಳೆಯ ಕೊಲೆ ಅಪರಾಧಿಗೆ ಜೀವನ ಪರ್ಯಂತ ಜೈಲು ಶಿಕ್ಷೆ

09:00 AM Mar 27, 2018 | Team Udayavani |

ಕುಂದಾಪುರ: ನಗರದ ವಸತಿ ಗೃಹದಲ್ಲಿ 3 ವರ್ಷಗಳ ಹಿಂದೆ ಗಂಗೊಳ್ಳಿ ಮೂಲದ ಮಹಿಳೆಯನ್ನು ಕೊಂದು, ಚಿನ್ನಾಭರಣ ದೋಚಿದ ಪ್ರಕರಣದ ಅಪರಾಧಿ, ಮುಂಬಯಿ ಮೂಲದ ಅಫ್ಜಲ್‌ ಅಲಿಯಾಸ್‌ ಅಫ್ಜಲ್‌ ಖಾನ್‌ (42)ಗೆ ಉಸಿರು ಇರುವವರೆಗೆ (ಜೀವನ ಪರ್ಯಂತ ) ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ಮಾ. 20ಕ್ಕೆ ಮುಗಿದಿದ್ದು, ಅಫ್ಜಲ್‌ ಖಾನ್‌ ದೋಷಿಯೆಂದು ಸಾಬೀತಾಗಿತ್ತು. ಕಾರವಾರ ಜೈಲಿನಲ್ಲಿದ್ದ ಅಪರಾಧಿಯನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್‌ ಖಂಡೇರಿ ಅವರು ತೀರ್ಪು ಪ್ರಕಟಿಸಿದ್ದಾರೆ.

Advertisement

ಶಿಕ್ಷೆಗಳ ವಿವರ
ಸೆಕ್ಷನ್‌ 302ರಡಿ ಮಹಿಳೆ ಕೊಲೆ ಆರೋಪಕ್ಕೆ ಸಾಯುವವರೆಗೂ ಜೀವಾವಧಿ ಶಿಕ್ಷೆ ಹಾಗೂ 50 ಸಾ.ರೂ. ದಂಡ, ಸೆಕ್ಷನ್‌ 404ರಡಿ ಮೃತದೇಹದ ಮೇಲಿದ್ದ ಚಿನ್ನಾಭರಣ ಸುಲಿಗೆಗೆ 5 ವರ್ಷ ಸಜೆ, 20 ಸಾ.ರೂ. ದಂಡ, ಮೋಸ ಮಾಡುವ ಉದ್ದೇಶದಿಂದ ಡೆತ್‌ನೋಟ್‌ ಸೃಷ್ಟಿಗೆ ಸೆಕ್ಷನ್‌ 468ರಡಿ 5 ವರ್ಷ ಕಠಿನ ಸಜೆ, 20 ಸಾ. ರೂ. ದಂಡ, ಸೆಕ್ಷನ್‌ 417ರಡಿ ಮೋಸದಿಂದ ಲಾಡ್ಜ್ಗೆ ಕರೆಸಿದ್ದಕ್ಕೆ 1 ವರ್ಷ ಕಠಿನ ಸಜೆ ಹಾಗೂ 5 ಸಾ.ರೂ. ದಂಡ, ಸೆಕ್ಷನ್‌ 465ರಡಿ ನಕಲಿ ಡೆತ್‌ನೋಟ್‌ಗೆ 1 ವರ್ಷ ಕಠಿನ ಸಜೆ, 5 ಸಾ.ರೂ. ದಂಡ ವಿಧಿಸಲಾಗಿದೆ. ಮೃತರ ಕುಟುಂಬದವರು  ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖೀಸಿದ್ದಾರೆ. 

25 ಸಾಂದರ್ಭಿಕ ಸಾಕ್ಷಿ 
ಪ್ರಕರಣ ನಡೆದ ಕೆಲವು ದಿನಗಳ ಬಳಿಕ ಆತನನ್ನು ಆಗಿನ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್‌ ನೇತೃತ್ವದ ಕುಂದಾಪುರ ಪೊಲೀಸರ ತಂಡ ಮುಂಬಯಿಯಲ್ಲಿ ಬಂಧಿಸಿತ್ತು. ತನಿಖೆ ನಡೆಸಿದ ದಿವಾಕರ್‌  ಕುಂದಾಪುರದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಕರಣದಲ್ಲಿ 45 ಸಾಂದರ್ಭಿಕ ಸಾಕ್ಷಿಗಳಿದ್ದು, ಅದರಲ್ಲಿ 25 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಈತ ಚಿನ್ನಾಭರಣ ಅಡವಿಟ್ಟ ಮುಂಬಯಿಯ ಬ್ಯಾಂಕ್‌ ಅಧಿಕಾರಿಗಳನ್ನು ಕರೆಸಿ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಜಿಲ್ಲಾ ಸರಕಾರಿ ಅಭಿಯೋಜಕರಾಗಿ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು. 

ಪ್ರಕರಣದ ವಿವರ
ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿಯಿರುವ ವಸತಿಗೃಹದಲ್ಲಿ 2015ರ ಎ. 15ರಂದು ಅಜಯ್‌ ಕುಮಾರ್‌ ಎಂದು ಹೇಳಿಕೊಂಡು ರೂಂ ಬುಕ್‌ ಮಾಡಿದ್ದ. ಗಂಗೊಳ್ಳಿಯ ಲೀಲಾವತಿ ದೇವಾಡಿಗ (55) ಅವರನ್ನು ಗಂಗೊಳ್ಳಿಯ ದೇವಸ್ಥಾನಕ್ಕೆ ದೇಣಿಗೆ ಕೊಡುವುದಾಗಿ ಕರೆಸಿ, ಬಳಿಕ ಜ್ಯೂಸ್‌ ಹಾಗೂ ನೀರಿನಲ್ಲಿ ಅಮಲು ಪದಾರ್ಥ ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಿ ವಿದ್ಯುತ್‌ ವಯರ್‌ನಿಂದ ಕತ್ತು ಬಿಗಿದು ಕೊಲೆಗೈದಿದ್ದ. ಗಾಯವಾದ ಕುತ್ತಿಗೆಗೆ ಬಟ್ಟೆ ಕಟ್ಟಿ ವಸತಿಗೃಹದಿಂದ ಮೃತದೇಹವನ್ನು ಹೊರಗೆ ಸಾಗಿಸಲು ಪ್ರಯತ್ನಿಸಿದ್ದ. ಅದರಲ್ಲಿ ವಿಫಲನಾದ ಬಳಿಕ ಆಕೆ ಹೆಸರಲ್ಲಿ ಈತನೇ ಬೇರೊಬ್ಬರಿಂದ ಡೆತ್‌ ನೋಟ್‌ ಬರೆಸಿ, ಕೊಲೆಗೆ ಬಳಸಿದ್ದ ವಯರ್‌ ಅನ್ನು ಕಿಟಕಿಯಿಂದ ಹೊರಗೆಸೆದು, ಮೃತದೇಹದ ಮೇಲಿದ್ದ ಚಿನ್ನಾಭರಣ, ಮೊಬೈಲ್‌ ಜತೆಗೆ ಮುಂಬಯಿಗೆ ಪರಾರಿಯಾಗಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next