ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ ಎಸ್ ಎ) ಅಜಿತ್ ದೋವಲ್ ನಿವಾಸದಲ್ಲಿ ಭದ್ರತಾ ಲೋಪ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಬುಧವಾರ (ಫೆ.16) ದೋವಲ್ ನಿವಾಸದೊಳಕ್ಕೆ ಪ್ರವೇಶಿಸಲು ಯತ್ನಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣ
ಮನೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬಂದಿಗಳು ತಡೆದಿದ್ದು, ಈತನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿ ವಿವರಿಸಿದೆ. ಮೂಲಗಳ ಪ್ರಕಾರ, ದೋವಲ್ ನಿವಾಸದೊಳಕ್ಕೆ ಪ್ರವೇಶಿಸಿದ ವ್ಯಕ್ತಿ ತನ್ನ ದೇಹದೊಳಗೆ ಚಿಪ್ ಇದ್ದು, ಇದನ್ನು ಬಾಹ್ಯವಾಗಿ ನಿಯಂತ್ರಿಸಲಾಗುತ್ತಿದೆ ಎಂದು ಹೇಳಿದ್ದ.
ಎನ್ ಎಸ್ ಎ ಅಜಿತ್ ದೋವಲ್ ನಿವಾಸ ಪ್ರವೇಶಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಬೆಂಗಳೂರು ನಿವಾಸಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಎಂಆರ್ ಐ ಸ್ಕ್ಯಾನ್ ಮಾಡಿಸಿದ್ದು, ಯಾವುದೇ ಚಿಪ್ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ದೋವಲ್ ನಿವಾಸದೊಳಗೆ ಪ್ರವೇಶಿಸಲು ಯತ್ನಿಸಿರುವ ಬೆಂಗಳೂರಿನ ವ್ಯಕ್ತಿಯನ್ನು ದೆಹಲಿಯ ವಿಶೇಷ ಭಯೋತ್ಪಾದಕ ನಿಗ್ರಹ ಘಟಕ ವಶಕ್ಕೆ ತೆಗೆದುಕೊಂಡಿಲ್ಲ ಎಂದು ವರದಿ ವಿವರಿಸಿದೆ.