ಬೆಂಗಳೂರು: ಭೀಕರ ಮಳೆಯಿಂದ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದೆ. ಜನ ಜೀವನದ ಅಸ್ತವ್ಯಸ್ತವಾಗಿದೆ. ನಿತ್ಯದ ಬದುಕಿಗೆ ಮಳೆ ಕೊಳ್ಳಿಯಿಟ್ಟಿದೆ.ಸಿಲಿಕಾನ್ ಸಿಟಿ ಬೆಂಗಳೂರಿನ ಮಳೆಯ ರಾದ್ಧಾಂತಕ್ಕೆ ನೂರಾರು ಕುಟುಂಬಗಳು ತಮ್ಮ ಮನೆಯಲ್ಲಿನ ಸಾಮಾನು, ಆಹಾರ ಸಾಮಾಗ್ರಿ ಎಲ್ಲವನ್ನೂ ಕಳೆದುಕೊಂಡು ಮನೆಯಿಂದ ಹೊರಗೆ ಬಂದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ದಿನ ನಿತ್ಯ ಕೆಲಸಕ್ಕೆ ಹೋಗುವ ಜನರ ಪರಿಸ್ಥಿತಿ ಕೂಡ ಅತಂತ್ರವಾಗಿದೆ.
ಐಟಿ – ಬಿಟಿಯವರಿಗೆ ವರ್ಕ್ ಫ್ರಮ್ ಹೋಮ್ ಕೆಲಸವಾದರೆ, ಕೆಲವರಿಗೆ ಮಳೆಯ ನಡುವೆಯೂ ಕೆಲಸಕ್ಕೆ ಹೋಗುವ ಅನಿವಾರ್ಯತೆಯಿದೆ. ಟ್ವಿಟರ್ ಬಳಕೆದಾರರೊಬ್ಬರು ಬೆಂಗಳೂರಿನ ಉದ್ಯೋಗಿಗಳ ಸ್ಥಿತಿಯನ್ನು ಫೋಟೋವೊಂದರ ಮೂಲಕ ಹಂಚಿಕೊಂಡಿದ್ದೀಗ ವೈರಲ್ ಆಗಿದೆ.
ಟ್ವಿಟರ್ ಬಳಕೆದಾರ ಸಂಕೇತ್ ಸಾಹು, ಕಾಫಿ ಶಾಪ್ ಒಂದರಲ್ಲಿ ನಾಲ್ಕೈದು ಜನರ ಗುಂಪೊಂದು ಕಂಪ್ಯೂಟರ್ ಸೆಟ್ ಆಪ್ ನ್ನು ಹಾಕಿ ಕೆಲಸ ಮಾಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಥರ್ಡ್ ವೇವ್ ಕಾಫಿ ಶಾಪ್ ನಲ್ಲಿ ಗುಂಪೊಂದು ಕಂಪ್ಯೂಟರ್ ಗಳನ್ನು ಹಾಕಿ ಕೆಲಸ ಮಾಡುವುದನ್ನು ನೋಡಿದೆ. ಇವರ ಆಫೀಸ್ ಮಳೆ ನೀರಿನ ಪ್ರವಾಹದಿಂದ ತತ್ತರಿಸಿದೆ ಎಂದು ಬರೆದುಕೊಂಡಿದ್ದಾರೆ. ಟ್ವಿಟರ್ ನಲ್ಲಿ ಈ ಫೋಟೋ 1800 ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 98 ರೀ ಟ್ವೀಟ್ ಆಗಿವೆ. ಈ ಫೋಟೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉದ್ಯೋಗಿಗಳಿಗೆ ಅನ್ಯಾಯವಾಗಿದೆ ಎಂದು ಕೆಲವರು ಹೇಳಿದರೆ, ಇದು ಹೊಸತಲ್ಲ ಪರಿಸ್ಥಿತಿ ಬಂದಾಗ ಇಂಥದ್ದನ್ನು ನಾವು ಕೂಡ ಮಾಡಿದ್ದೇವೆ ಕೆಲವರು ಎಂದಿದ್ದಾರೆ. ಇನ್ನು ಕೆಲವರು ಇದು ವಿಷಕಾರಿ ಕೆಲಸದ ಸಂಸ್ಕೃತಿ ಎಂದು ಟೀಕಿಸಿದ್ದಾರೆ.