ಇಡುಕ್ಕಿ: ಆಸ್ತಿ ವಿಚಾರದ ಗಲಾಟೆಯ ಪರಿಣಾಮ ವೃದ್ಧರೊಬ್ಬರು ತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳನ್ನು ಜೀವಂತವಾಗಿ ದಹನ ಮಾಡಿದ ಆಘಾತಕಾರಿ ಘಟನೆ ಕೇರಳ ರಾಜ್ಯದ ಇಡುಕ್ಕಿಯಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಳಗೆ ಮಲಗಿದ್ದ ಆರೋಪಿಯ ಮಗ, ಸೊಸೆ ಮತ್ತು ಶಾಲೆಗೆ ಹೋಗುತ್ತಿದ್ದ ಇಬ್ಬರು ಮೊಮ್ಮಗಳು ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ 79 ವರ್ಷದ ಹಮೀದ್, ಹೊರಗಿನಿಂದ ಮನೆಗೆ ಬೀಗ ಹಾಕಿದ ನಂತರ ಕಿಟಕಿಯ ಮೂಲಕ ಪೆಟ್ರೋಲ್ ತುಂಬಿದ ಸಣ್ಣ ಬಾಟಲಿಗಳನ್ನು ಮನೆಯೊಳಗೆ ಎಸೆದಿದ್ದಾನೆ. ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾನೆ.
ಮನೆಯೊಳಗೆ ಮಲಗಿದ್ದವರಿಗೆ ಬೆಂಕಿಯ ಬಗ್ಗೆ ತಿಳಿಯುತ್ತಿದ್ದಂತೆ ಬೊಬ್ಬೆ ಹಾಕಲಾರಂಭಿಸಿದ್ದರು. ನೆರೆಹೊರೆಯವರು ಕೂಡಲೇ ಸ್ಥಳಕ್ಕೆ ಬಂದರಾದರೂ ಭಾರೀ ಬೆಂಕಿಯ ಜ್ವಾಲೆಯ ಕಾರಣದಿಂದ ರಕ್ಷಣೆ ಮಾಡಲಾಗಲಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಲ್ಟಿಯಾದ ಖಾಸಗಿ ಬಸ್; ಎಂಟು ಮಂದಿಗೆ ಗಾಯ!
“ಇದು ಸಂಪೂರ್ಣ ಪೂರ್ವನಿಯೋಜಿತ ಅಪರಾಧ ಕೃತ್ಯ. ಆರೋಪಿ ಹಮೀದ್ ಕನಿಷ್ಠ ಐದು ಬಾಟಲಿಗಳಲ್ಲಿ ಪೆಟ್ರೋಲ್ ಶೇಖರಣೆ ಮಾಡಿದ್ದ. ಮನೆಯ ನೀರಿನ ತೊಟ್ಟಿಯನ್ನು ಖಾಲಿ ಮಾಡಿದ್ದ. ಅದಲ್ಲದೆ ನೆರೆಹೊರೆಯವರು ಬಾವಿಯಿಂದ ನೇರು ಸೇದಬಾರದು ಎಂದು ಮನೆಯ ಬಾವಿಯ ಹಗ್ಗ ಮತ್ತು ಬಕೆಟ್ ಗಳನ್ನೂ ಆರೋಪಿ ತಪ್ಪಿಸಿ ಇಟ್ಟಿದ್ದ” ಎಂದು ಪೊಲೀಸರು ತಿಳಿಸಿದ್ದಾರೆ.
“ತಂದೆ ಮತ್ತು ಕಿರಿಯ ಮಗಳ ಸುಟ್ಟ ದೇಹಗಳು ಒಬ್ಬರನ್ನೊಬ್ಬರು ಬಿಗಿಯಾಗಿ ತಬ್ಬಿಕೊಂಡಿರುವುದು ಕಂಡುಬಂದಿತ್ತು. ಮರಣೋತ್ತರ ಪರೀಕ್ಷೆಗೆ ದೇಹವನ್ನು ಕಳುಹಿಸಿಕೊಡುವ ಸಲುವಾಗಿ ಈ ತಂದೆ-ಮಗಳ ದೇಹಗಳನ್ನು ಪ್ರತ್ಯೇಕ ಮಾಡಲು ಕಷ್ಟವಾಗಿತ್ತು” ಎಂದು ಪೊಲೀಸರು ಘಟನೆಗೆ ಭೀಕರತೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಪೊಲೀಸರು ಆರೋಪಿ ಹಮೀದ್ ನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಮನೆ ಮತ್ತು ಆಸ್ತಿ ವಿಚಾರಕ್ಕೆ ಪುತ್ರನೊಂದಿಗಿನ ಕಲಹದಿಂದ ತಾನು ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ