Advertisement

ಉಡುಪಿ: ದೋಣಿಯಿಂದ ಬಿದ್ದು 14 ಗಂಟೆ ಸಮುದ್ರದಲ್ಲಿದ್ದ ವ್ಯಕ್ತಿಯ ರಕ್ಷಣೆ

12:12 AM Apr 18, 2023 | Team Udayavani |

ಉಡುಪಿ: ಪರ್ಸಿನ್‌ ಬೋಟ್‌ನಿಂದ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದ ಮೀನುಗಾರ 14 ಗಂಟೆಗಳ ಕಾಲ ನೀರಿನಲ್ಲಿದ್ದು, ಬಳಿಕ ರಕ್ಷಣೆಗೊಳಗಾದ ಘಟನೆ ಮಲ್ಪೆಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಪುಕಾಲು ಕಮೇಯ (32) ರಕ್ಷಣೆಗೊಳಗಾದವರು.

Advertisement

ಘಟನೆ ವಿವರ: ಸುಮಾರು 35 ಮಂದಿ ಮೀನುಗಾರರ ತಂಡ ಪರ್ಸಿನ್‌ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿ ಹಿಂತಿರುಗುತ್ತಿದ್ದಾಗ ಹಿಂದುಗಡೆ ಇದ್ದ ಪುಕಾಲು ಕಮೇಯ ಆಕಸ್ಮಿಕವಾಗಿ ಕಡಲಿಗೆ ಬಿದ್ದರು. ಈ ವಿಚಾರ ಸ್ವಲ್ಪ ದೂರು ಕ್ರಮಿಸಿದ ಬಳಿಕ ಇತರ ಮೀನುಗಾರರಿಗೆ ತಿಳಿಯಿತು. ಕೂಡಲೇ ಹಿಂದಕ್ಕೆ ತೆರಳಿ ಹುಡುಕಾಟ ನಡೆಸಿದರೂ ಯಾವುದೇ ಉಪಯೋಗವಾಗಲಿಲ್ಲ.

ಬಳಿಕ ಮೀನುಗಾರರು ಜೀವರಕ್ಷಕರಿಗೆ ಮಾಹಿತಿ ನೀಡಿದರು. ನೀರಿಗೆ ಬಿದ್ದ ವ್ಯಕ್ತಿ ಸ್ವಲ್ಪ ಸಮಯ ಈಜಾಡಿದಾಗ ಅಂಜಲ್‌ ಮೀನಿಗೆ ಹಾಕಿದ್ದ ಬೀಡಿನ ಬಲೆ ಕಂಡುಬಂತು. ಅದರಲ್ಲಿ ಅಳವಡಿಸಿದ್ದ ಬಾವುಟವನ್ನು ಹಿಡಿದು ಬಲೆಯನ್ನೇ ಆಸ‌ರೆಯಾಗಿಸಿಕೊಂಡು ಅಲ್ಲಿಯೇ ನಿಂತುಕೊಂಡರು. ಆ ಬಲೆಯನ್ನು ಎ. 17ರಂದು ಸಂಜೆ 6ರ ಸುಮಾರಿಗೆ ಹಾಕಿದ್ದು, ಬೆಳಗ್ಗೆ 3 ಗಂಟೆಗೆ ತೆಗೆಯುತ್ತಾ ಬರುವಾಗ ಕೊನೆಯಲ್ಲಿ ನಿಂತಿದ್ದ ಇವರು ಕಂಡುಬಂದರು. ತತ್‌ಕ್ಷಣ ನೀರಿನಿಂದ ಮೇಲೆತ್ತಿ ರಕ್ಷಿಸಿ ದಡಕ್ಕೆ ತರಲಾಯಿತು. ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಆಪತಾºಂಧವ ಈಶ್ವರ ಮಲ್ಪೆ ಅವರು ದಾಖಲಿಸಿದರು. ಈಗ ಚೇತರಿಸಿಕೊಂಡಿದ್ದು,ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಳೆದ 5 ವರ್ಷಗಳಿಂದ ಮಲ್ಪೆಯಲ್ಲಿ ಬೋಟ್‌ನ ನಿರ್ವಹಣೆ ಸಹಿತ ವಿವಿಧ ಕೆಲಸ ಮಾಡಿಕೊಂಡಿದ್ದೇನೆ. ನಾನು ನೀರಿಗೆ ಬಿದ್ದ ಬಳಿಕ ಬೋಟ್‌ ಮರಳಿ ಬಂತು. ನಾನು ಸಂಜ್ಞೆ ಮಾಡಿದೆ. ಆದರೆ ಅವರಿಗೆ ತಿಳಿಯಲಿಲ್ಲ. ಬಳಿಕ ಸಮುದ್ರದಲ್ಲಿ ಲಭಿಸಿದ್ದ ಕೆಲವು ಪ್ಲಾಸ್ಟಿಕ್‌ ಬಾಟಲಿಗಳನ್ನು ಹೊಟ್ಟೆಯ ಅಡಿಗೆ ಇರಿಸಿಕೊಂಡು ಮೀನಿಗೆ ಹಾಕಲಾಗಿದ್ದ ಬಲೆಯ ಆಶ್ರಯ ಪಡೆದು ಜೀವ ರಕ್ಷಿಸಿಕೊಂಡೆ.
– ಪುಕಾಲು ಕಮೇಯ, ಮೀನುಗಾರ

Advertisement

Udayavani is now on Telegram. Click here to join our channel and stay updated with the latest news.

Next