ಚೆನ್ನೈ: ಟೆರೆಸ್ ಅಪಾರ್ಟ್ ಮೆಂಟ್ ಮೇಲೆ ಕುಡಿದು ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿಕೊಂಡ ಪತ್ನಿ, ಸಹೋದರನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕೋಪಗೊಂಡ ಪತಿ ಎಂಟು ಮಂದಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ತಮಿಳುನಾಡಿನ ಮುನಿಯಪ್ಪ ನಗರ್ ನೇರ್ ಕುಂಡ್ರಮ್ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಪೊಲೀಸ್ ಮಾಹಿತಿ ಪ್ರಕಾರ,ಅಕ್ಕಸಾಲಿಗ ಕಣ್ಣಪ್ಪನ್ (33) ತನ್ನ ಹೆಂಡತಿ ರಂಜನಿ, ಹಾಗೂ ಆಕೆಯ ಸಹೋದರ ಭಾಸ್ಕರ ಜೊತೆ ಅಪಾರ್ಟ್ ಮೆಂಟ್ ನ 3ನೇ ಮಹಡಿಯಲ್ಲಿ ವಾಸವಾಗಿದ್ದರು. ಅದೇ ಅಪಾರ್ಟ್ ಮೆಂಟ್ ನ 2ನೇ ಮಹಡಿಯ ರೂಂನಲ್ಲಿ ಕೊಯಂಬೀಡು ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ 8 ಮಂದಿಯೂ ವಾಸವಾಗಿದ್ದರು.
ಭಾನುವಾರ ರಾತ್ರಿ ಅಪಾರ್ಟ್ ಮೆಂಟ್ ನ ಟೆರೆಸ್ ಮೇಲೆ ಎಂಟು ಮಂದಿ ಕುಳಿತುಕೊಂಡು ಎಣ್ಣೆ ಪಾರ್ಟಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಗದ್ದಲ ಹೆಚ್ಚಾಗಿದ್ದರಿಂದ ಕಣ್ಣಪ್ಪನ್ ಮತ್ತು ಭಾಸ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಇವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಎಂಟು ಮಂದಿ ಭಾಸ್ಕರ್ ಮೇಲೆ ಹಲ್ಲೆ ನಡೆಸಿದ್ದರು. ಏತನ್ಮಧ್ಯೆ ರಂಜಿನಿ ಮಧ್ಯಪ್ರವೇಶಿಸಿದಾಗ ಆಕೆ ಮೇಲೂ ಹಲ್ಲೆ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದ ಕಣ್ಣಪ್ಪನ್ ಮನೆಯೊಳಗೆ ಹೋಗಿ ಆ್ಯಸಿಡ್ ತಂದು ಎಂಟು ಮಂದಿ ಮೇಲೆ ಚೆಲ್ಲಿಬಿಟ್ಟಿದ್ದ.
ಇದರಿಂದಾಗಿ ಅಲಗುಮುತ್ತು(38), ಕರುಪ್ಪುಸ್ವಾಮಿ(32), ವಾಂಜಿನಾಥನ್ (18), ವೇಲ್ ಮುರುಗನ್ (23), ವೀರಸ್ವಾಮಿ(23), ಅಶೋಕ್ (19), ವೇಲ್ ಮುರುಗನ್ (25) ಮತ್ತು ವೇಲ್ ಮುರುಗನ್ (23) ಸೇರಿ ಎಂಟು ಮಂದಿ ಆ್ಯಸಿಡ್ ದಾಳಿಗೆ ಒಳಗಾಗಿದ್ದು, ಅವರೆಲ್ಲ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೊಯಂಬೀಡು ಪೊಲೀಸರು ಆರೋಪಿ ಕಣ್ಣಪ್ಪನ್ ನನ್ನು ಬಂಧಿಸಿದ್ದಾರೆ.