ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಶನಿವಾರ ನಡೆದ ರಣರೋಚಕ ಪಂದ್ಯವನ್ನು ಗೆದ್ದು ಪ್ಲೇ ಆಫ್ ಗೆ ಹೆಜ್ಜೆ ಹಾಕಿದೆ. ಸಿಎಸ್ ಕೆ ವಿರುದ್ಧ ಗೆಲ್ಲಲೇ ಬೇಕಾದ ಪಂದ್ಯವನ್ನು ಗೆದ್ದು ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ. ಆರಂಭದಲ್ಲಿ ಸತತ ಸೋಲಿನಿಂದ ಇನ್ನೇನು ಕೂಟದಿಂದಲೇ ಹೊರ ಬೀಳುತ್ತಾರೆ ಎನ್ನುವಾಗ ಸತತ ಆರು ಪಂದ್ಯ ಗೆದ್ದ ಆರ್ ಸಿಬಿ ಹುಡುಗರು ಬೆಂಗಳೂರಿನಲ್ಲಿ ಇತಿಹಾಸ ಬರೆದಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಆರ್ ಸಿಬಿ 27 ರನ್ ಅಂತರದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಐದು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದರೆ, ಸಿಎಸ್ ಕೆ ತಂಡವು 191 ರನ್ ಮಾತ್ರ ಗಳಿಸಲು ಶಕ್ತವಾಯಿತು.
39 ಎಸೆತಗಳಲ್ಲಿ 54 ರನ್ ಗಳಿಸಿದ ಮತ್ತು ಅತ್ಯದ್ಭುತ ಕ್ಯಾಚ್ ಹಿಡಿದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಫಾಫ್ ಅವರು ಈ ಪ್ರಶಸ್ತಿಯನ್ನು ತಂಡದ ಬೌಲರ್ ಗೆ ಅರ್ಪಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ನಾಯಕ ಫಾಫ್, “ನಾನು ಈ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಯಶ್ ದಯಾಳ್ ಅವರಿಗೆ ಅರ್ಪಿಸುತ್ತೇನೆ. ಅವರು ಬೌಲಿಂಗ್ ಮಾಡಿದ ರೀತಿ ನಂಬಲಸಾಧ್ಯವಾಗಿತ್ತು., ಅವನು ಅದಕ್ಕೆ ಅರ್ಹನಾಗಿರುತ್ತಾನೆ” ಎಂದರು.
ನಾಲ್ಕು ಓವರ್ ಬೌಲಿಂಗ್ ಮಾಡಿದ ಯಶ್ ದಯಾಳ್ 42 ರನ್ ನೀಡಿ ಎರಡು ವಿಕೆಟ್ ಕಿತ್ತರು. ಕೊನೆಯ ಓವರ್ ನಲ್ಲಿ ಸಿಎಸ್ ಕೆ ಕ್ವಾಲಿಫೈ ಆಗಲು 17 ರನ್ ಬೇಕಾಗಿದ್ದಾಗ ಮೊದಲ ಎಸೆತದಲ್ಲಿ ಸಿಕ್ಸರ್ ಹೋದರೂ ಉಳಿದ ಐದು ಎಸೆತಗಳಲ್ಲಿ ಕೇವಲ ಒಂದು ರನ್ ನೀಡಿದ ಯಶ್ ದಯಾಳ್ ಆರ್ ಸಿಬಿ ಪಾಲಿಗೆ ಹೀರೋ ಆದರು.