ರಾಣಿಬೆನ್ನೂರು(ಹಾವೇರಿ): ಶಂಕಿತ ಕೋವಿಡ್ ವ್ಯಕ್ತಿಯ ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆ ಬಳಿ ಇರುವ ಬಸ್ ತಂಗುದಾಣದಲ್ಲಿ ಇಟ್ಟು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ನಡೆದಿದೆ.
ಆರೋಗ್ಯ ಇಲಾಖೆಯವರು ಮಾನವೀಯ ಮೌಲ್ಯ ಮರೆತು ಶವವನ್ನು ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣದಲ್ಲಿ ಇಟ್ಟಿರುವುದು ಇಲ್ಲಿನ ಜನರ ಆತಂಕಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
3 ದಿನಗಳಿಂದ ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ಮೃತ್ಯುಂಜಯ ನಗರದ ನಿವಾಸಿ ಚಂದ್ರಶೇಖರ ಹುಚ್ಚಪ್ಪ ಸಿದ್ದನಕೋಟೆ (40) ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದರು. ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಂತರ ಆ ವ್ಯಕ್ತಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಬಂದು ಕುಳಿತುಕೊಂಡಾಗ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ರಕ್ಷಾ ಕವಚ ಕಿಟ್ ಬಳಸಿ ಮೃತ ವ್ಯಕ್ತಿಯ ಶವ ಸಾಗಿಸಲು ಆಂಬ್ಯುಲೆನ್ಸ್‌ಗಾಗಿ ಕಾದಿದ್ದಾರೆ. ಇದೇ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಆತಂಕ ಸೃಷ್ಟಿಸಿದೆ.
ಆರೋಗ್ಯ ಇಲಾಖೆ ಸಿಬ್ಬಂದಿ ಆಂಬ್ಯುಲೆನ್ಸ್ ಮೂಲಕ ಕೋವಿಡ್-19 ನಿಯಮಾನುಸಾರ ಶವ ಸಾಗಿಸಿದ್ದಾರೆ.
ತನಿಖೆಗೆ ಸೂಚನೆ
ರಾಣಿಬೆನ್ನೂರ ಬಸ್ ನಿಲ್ದಾಣದಲ್ಲಿ ಶವ ಇಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಏನು ಲೋಪವಾಗಿದೆ ಎಂಬುದರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರಾದರೂ ಮೃತಪಟ್ಟರೆ ರಾಜ್ಯ ಸರ್ಕಾರ ಹೊರಡಿಸಿರುವ ಎಸ್‌ಒಪಿ ಮಾರ್ಗಸೂಚಿಯಂತೆಯೇ ಅಂತ್ಯಸಂಸ್ಕಾರ ಮಾಡುವಂತೆ ತಾಕೀತು ಮಾಡಲಾಗಿದೆ.
– ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವರು.