Advertisement
ಕೇರಳ ಅಲಪ್ಪುಳ ಮೂಲದ ಸರೋನ್ (23) ಆತ್ಮಹತ್ಯೆಗೆ ಯತ್ನಿಸಿದವ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
Related Articles
Advertisement
ಹೆಚ್ಚಿನ ಚಿಕಿತ್ಸೆಗಾಗಿ ಜಾಲಹಳ್ಳಿ ಆಸ್ಪತ್ರೆಯಿಂದ ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನ ಸ್ನೇಹಿತರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೆಲ ಕಾಲ ಮೆಟ್ರೋ ರೈಲುಗಳ ಸಂಚಾರ ಸ್ಥಗಿತ: ಯುವಕ ಹಳಿಗೆ ಜಿಗಿದ ಘಟನೆ ನಡೆದ ವೇಳೆ ಮೆಟ್ರೋದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಲಿಲ್ಲ. ರೈಲುಗಳಿಂದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು. ಘಟನೆಯ ಸಮಯದಲ್ಲಿ ನಾಲ್ಕು ರೈಲುಗಳನ್ನು ಇತರ ನಿಲ್ದಾಣದ ಪ್ಲಾಟ್‌ಫಾರ್ಮ್ ಗಳಲ್ಲಿ ಸ್ಥಗಿತಗೊಳಿಸಲಾಯಿತು.
ಯಶವಂತಪುರ – ನಾಗಸಂದ್ರ ಮಾರ್ಗದಲ್ಲಿ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಕೆಲ ಹೊತ್ತು ಸ್ಥಗಿತಗೊಳಿಸಲಾಗಿತ್ತು. ಆ ಅವಧಿಯಲ್ಲಿ ಯಶವಂತಪುರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಹಸಿರು ಮಾರ್ಗದ ಕಾರ್ಯಾಚರಣೆ ನಡೆಸಲಾಯಿತು. ರಾತ್ರಿ 8 ಗಂಟೆಯಿಂದ ಸಂಪೂರ್ಣ ಹಸಿರು ಮಾರ್ಗದಲ್ಲಿ ಕಾರ್ಯಾಚರಣೆ ಪುನರಾರಂಭಿಸಲಾಯಿತು ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. ಯಶವಂತಪುರ ಸೇರಿ ಕೆಲವು ಮೆಟ್ರೋ ನಿಲ್ದಾಣದಲ್ಲಿ ಜನರು ಮೆಟ್ರೋ ಇಲ್ಲದೇ ಪರದಾಡಿದ್ದಾರೆ. ರೈಲು ಸೇವೆ ಸ್ಥಗಿತಗೊಂಡ ಸಮಯದಲ್ಲಿ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಸರತಿ ಸಾಲಿನಲ್ಲಿ ಹೊರ ಬರುತ್ತಿರುವ ದೃಶ್ಯ ಕಂಡು ಬಂತು.
ಮೆಟ್ರೋ ಹಳಿಗಳ ಪಕ್ಕದಲ್ಲಿ 750 ವೋಲ್ಟ್ ಹೆವಿ ಪವರ್ ಲೈನ್ ಹಾದು ಹೋಗಿರುತ್ತದೆ. ಹಾಗಾಗಿ ಮತ್ತೆ ಪವರ್ ಜನರೇಟ್ ಮಾಡಲು ಅರ್ಧ ಗಂಟೆ ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಕಾರ್ಯಾಚರಣೆ ಕೆಲ ಕಾಲ ಸ್ಥಗಿತಗೊಂಡಿತು ಎಂದು ತಿಳಿದು ಬಂದಿದೆ.
ಅರ್ಧ ಗಂಟೆ ಪರದಾಡಿದ ಪ್ರಯಾಣಿಕರು:
ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ 4 ಮೆಟ್ರೋಗಳು ಕೆಲ ಕಾಲ ಸ್ಥಗಿತಗೊಂಡಿದ್ದವು. ಪೀಕ್ ಅವರ್ ಸಮಯದಲ್ಲಿ ದುರ್ಘಟನೆ ನಡೆದ ಹಿನ್ನೆಲೆಯಲ್ಲಿ ಕೆಲಸ ಮುಗಿಸಿ ಮನೆಯತ್ತ ಸಾಗುತ್ತಿದ್ದ ಸಾವಿರಾರು ಪ್ರಯಾಣಿಕರು ಗೊಂದಲಕ್ಕೆ ಒಳಗಾದರು. ಮೆಟ್ರೋ ರೈಲನ್ನೇ ಅವಲಂಬಿಸಿದ್ದ ಕೆಲ ಪ್ರಯಾಣಿಕರು ಅರ್ಧ ತಾಸು ಕಾದು ಮೆಟ್ರೋದಲ್ಲಿ ಪ್ರಯಾಣಿಸಿದರೆ, ಬಹುತೇಕ ಜನ ಬಸ್, ಆಟೋ, ಟ್ಯಾಕ್ಸಿ, ಕ್ಯಾಬ್ ಮೊರೆ ಹೋಗುತ್ತಿರುವುದು ಕಂಡು ಬಂತು. ಜಾಲ ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನೆರೆದಿದ್ದ ನೂರಾರು ಮಂದಿ ಮೆಟ್ರೋ ನಿಂತಿರುವುದನ್ನು ನೋಡಿ ಏನಾಗಿದೆ ಎಂಬ ಅರಿವಿಲ್ಲದೇ ಪರದಾಡುತ್ತಿರುವುದು ಕಂಡು ಬಂತು.
ಮೆಟ್ರೋ ಹಳಿಗೆ ಇಳಿದಿದ್ದ ಪ್ರಕರಣಗಳು:
- ಇತ್ತೀಚೆಗೆ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಮೆಟ್ರೋ ಟ್ರ್ಯಾಕ್‌ಗೆ ಇಳಿದಿದ್ದ ಪ್ರಕರಣ ನಡೆದಿತ್ತು. ಇವರನ್ನು ಗಮನಿಸಿದ್ದ ಸಿಬ್ಬಂದಿ ಕೂಡಲೇ ವಿದ್ಯುತ್ ಸಂಪರ್ಕ್ ತೆಗೆದು ಮಹಿಳೆಯನ್ನು ರಕ್ಷಿಸಿದ್ದರು. ನಂತರ ವಿಚಾರಿಸಿದಾಗ ಮೊಬೈಲ್ ಮೆಟ್ರೋ ಟ್ರ್ಯಾಕ್‌ಗೆ ಬಿದ್ದಿದ್ದ ಹಿನ್ನೆಲೆಯಲ್ಲಿ ರೈಲು ಹಳಿಗೆ ಮಹಿಳೆ ಇಳಿದಿದ್ದರು ಎಂಬುದು ತಿಳಿದು ಬಂದಿತ್ತು.
- ಇನ್ನು 2011-12ರಲ್ಲಿ ಮಹಾತ್ಮಗಾಂಧಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಮೆಟ್ರೋ ಹಳಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದ.
- ಕೆಲ ದಿನಗಳ ಹಿಂದೆ ಮೆಜೆಸ್ಟಿಕ್‌ನ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಕೈ ತಪ್ಪಿ ಹಳಿಯ ಮೇಲೆ ಬಿದ್ದಿತ್ತು. ಆ ವ್ಯಕ್ತಿ ಈ ಬಗ್ಗೆ ಮೆಟ್ರೋ ನಿಲ್ದಾಣದ ಸಿಬ್ಬಂದಿ ಗಮನಕ್ಕೆ ತಂದಿದ್ದರು.