Advertisement

ಮನುಷ್ಯ ಪ್ರಕೃತಿಯ ಭಾಗವೇ ಹೊರತು, ಪ್ರಕೃತಿ ಮನುಷ್ಯನ ಭಾಗವಲ್ಲ

09:34 PM Sep 01, 2020 | Karthik A |

ಪ್ರಕೃತಿ ಮನುಷ್ಯನ ಆಸೆಗಳನ್ನು ಈಡೇರಿಸುತ್ತದೆಯೇ ಹೊರತು ಆತನ ದುರಾಸೆಗಳನ್ನಲ್ಲ ಎಂಬ ಮಹಾತ್ಮಾ ಗಾಂಧೀಜಿಯವರ ಮಾತು ಮತ್ತೆ ಇಂದು ಸಾಬೀತಾಗಿದೆ.

Advertisement

ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ಮಾತೆಯನ್ನು ಅತೀ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಮನುಷ್ಯನಿಗೆ ಇದೀಗ ಸ್ವತಃ ನಿಸರ್ಗವೇ ಪಾಠ ಹೇಳಿದೆ. ಯಾವುದೇ ಶೋಷಣೆಗೈಯದೇ ಪ್ರಕೃತಿ ಮಾತೆಯನ್ನು ಅದರ ಪಾಡಿಗೆ ಬಿಟ್ಟರೆ ಮನುಕುಲಕ್ಕೆ ಅಗತ್ಯವಾಗಿರುವುದನ್ನೇ ನೀಡುತ್ತಾಳೆ ಎನ್ನುವುದಕ್ಕೆ ಸಾಕ್ಷಿ.

ವಾತಾವರಣದಲ್ಲಿ ಸಂಭವಿಸುತ್ತಿರುವ ಆರೋಗ್ಯಕರ ಬದಲಾವಣೆ. ಇವುಗಳಿಂದ ಜನಜೀವನ ಅಸ್ತವ್ಯಸ್ತವಾಗಿದ್ದರೂ, ಮಿತಿಮೀರಿದ ಮಾಲಿನ್ಯ, ಸಂಚಾರ-ವ್ಯವಹಾರ, ಅಗಾಧವಾದ ಪ್ರಾಕೃತಿಕ ಹಿಂಸಾಚಾರಗಳಿಗೆ ತುಸು ವಿರಾಮ ದೊರೆತಿದೆ. ಇದರಿಂದ ಪ್ರಕೃತಿ ಕೊಂಚ ಸಂತಸಗೊಂಡು ಮಾನವನ ಯೋಗ್ಯಕ್ಕನುಗುಣವಾದ ವಾತಾವರಣ ಕಲ್ಪಿಸಿಕೊಡುವಲ್ಲಿ ನಿರತಳಾಗಿದ್ದಾಳೆ.

ಭಾರತ ಸಹಿತ ಜಗತ್ತಿನ ಹೆಚ್ಚಿನ ದೇಶಗಳು ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗುತ್ತಿವೆ. ತಮ್ಮ ದೇಶವನ್ನು ಕೊರೊನಾ ಕಪಿಮುಷ್ಠಿಯಿಂದ ಕಾಪಾಡಲು ಲಾಕ್‌ಡೌನ್‌ ಎಂಬ ಅಸ್ತ್ರ ಪ್ರಯೋಗಿಸಿ, ಇಡೀ ದೇಶಕ್ಕೆ ದೇಶವನ್ನೇ ಸಂಪೂರ್ಣ ಸ್ತಬ್ಧಗೊಳಿಸಿರುವುದು ಎಲ್ಲರಿಗೂ ತಿಳಿದಿದೆ. ದೇಶದ ಚಟುವಟಿಕೆಗಳಿಗೆ ಬೀಗ ಜಡಿದಿದ್ದರಿಂದ ವಿಶ್ವದ ಆರ್ಥಿಕ ಸ್ಥಿತಿ ದುರ್ಬಲವಾಗಿರುವುದು ಎಲ್ಲರಿಗೂ ಕಾಣುವ ಸತ್ಯ. ಆದರೆ ಮಾನವನ ಬದುಕಿಗಾಗಿರುವ ಕಷ್ಟ- ನಷ್ಟಗಳ ನಡುವೆ ಪ್ರತಿಯೊಬ್ಬರೂ ಗಮನಿಸಲೇಬೇಕಾದ ಧನಾತ್ಮಕ ಸಂಗತಿಗಳಿವೆ. ಮಾನವ ಸೋತು ಕೈ ಚೆಲ್ಲಿ ಕುಳಿತಿದ್ದ ನೂರಾರು ವಿಚಾರಗಳನ್ನು ಕೋವಿಡ್‌ ಕೈಗೆತ್ತಿಕೊಂಡು ಮಾಡಿ ತೋರಿಸಿದೆ. ವಾಯುಮಾಲಿನ್ಯದಿಂದ ಬಳಲುತ್ತಿದ್ದ ದೆಹಲಿ, ಕಲುಷಿತಗೊಂಡಿದ್ದ ಗಂಗೆ, ಹಸಿರು ಮನೆ ಪರಿಣಾಮದಿಂದ ಕಂಗೆಟ್ಟ ವಾತಾವರಣ ಲಾಕ್‌ಡೌನ್‌ಸಮಯದಲ್ಲಿ ಇವುಗಳೆಲ್ಲವೂ ನಿರಾಳವಾಗಿದ್ದವು.

ಲಾಕ್‌ಡೌನ್‌ನಿಂದ ವಿಶ್ವದ ಹೆಚ್ಚಿನ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಅನಿಲ ಹಾಗೂ ವಿದ್ಯುತ್‌ ಬೇಡಿಕೆಯಲ್ಲಿ ಕುಸಿತ ಕಂಡಿತ್ತು. ಮಾತ್ರವಲ್ಲದೇ, ಶಾಲಾ-ಕಾಲೇಜು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ವಾಹನಗಳು ರಸ್ತೆಗೆ ಇಳಿಯದಿರುವುದು ಇಂಗಾಲ ಹೊರಸೂಸುವಿಕೆಯ ಪ್ರಮಾಣವು ತಗ್ಗಿರುವುದಕ್ಕೆ ಕಾರಣ. ಯು.ಕೆ. ಮೂಲದ “ನ್ಯಾಷನಲ್‌ ಕ್ಲೈಮೇಟ್‌ ಚೇಂಜ್‌ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಂತಾರಾಷ್ಟ್ರೀಯ ಅಧ್ಯಯನದ ವರದಿಯ ಪ್ರಕಾರ 2019ಕ್ಕೆ ಹೋಲಿಸಿದರೆ, ಜಾಗತಿಕ ಮಟ್ಟದಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣವು ಶೇ. 17ರಷ್ಟು ಇಳಿಕೆಯಾಗಿದೆ. ಮಾತ್ರವಲ್ಲ ಭಾರತದಲ್ಲಿ ಶೇ. 26ರಷ್ಟು ತಗ್ಗಿದೆ ಎನ್ನುತ್ತಿದೆ. ದ್ವಿತೀಯ ಮಹಾಯುದ್ಧದ ಅನಂತರ ವಾರ್ಷಿಕ ಸರಾಸರಿ ಇಳಿಕೆಯ ಪ್ರಮಾಣವು ಇಷ್ಟಾಗಿದ್ದು ಇದೇ ಮೊದಲು ಎಂದು ಸಂಶೋಧಕರ ಅಭಿಪ್ರಾಯ.

Advertisement

ಚೀನ, ಭಾರತ, ಅಮೆರಿಕ ಹಾಗೂ ಯುರೋಪ್‌ ರಾಷ್ಟ್ರಗಳಲ್ಲಿ ಜಾರಿಗೆ ತಂದ ಸುದೀರ್ಘ‌ ಲಾಕ್‌ಡೌನ್‌, ಅದರಿಂದಾದ ಜನಸಂಚಾರ ನಿರ್ಬಂಧಗಳೇ ಈ ಫ‌ಲಿತಾಂಶಕ್ಕೆ ಪ್ರಮುಖ ಕಾರಣ. ಭಾರತದ ಜತೆಗೆ ಯು.ಕೆ. ಶೇ 30.7, ಯು.ಎಸ್‌.ಎ. ಶೇ 31.6, ಚೀನ ಶೇ 23.9ರಷ್ಟು ಇಂಗಾಲ ಹೊರಸೂಸುವಿಕೆ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ಒಂದು ಕಡೆಯಾದರೆ, ಇನ್ನೂ ಇತ್ತೀಚೆಗಷ್ಟೇ ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಅರಬ್ಬೀ ಸಮುದ್ರದಲ್ಲಿ ಭಾರೀ ಸದ್ದು ಮಾಡಿದ್ದ ನಿಸರ್ಗ ಚಂಡಮಾರುತ ಹಾಗೂ ಅದರಿಂದಾಗಿ ಸುರಿದ ಅತೀ ಮಳೆಯು ನೀಡಿದ ಕೊಡುಗೆ ಮತ್ತೂಂದೆಡೆ. “ಸಿಸ್ಟಮ್‌ ಆಫ್ ಏರ್‌ ಕ್ವಾಲಿಟಿ ವೆದರ್‌ ಫಾರ್‌ಕಾಸ್ಟಿಂಗ್‌ ನಡೆಸುವ “ವಾಯು ಗುಣಮಟ್ಟ ಸೂಚ್ಯಂಕದಲ್ಲಿ 17 ಅಂಕಿಅಂಶ ದಾಖಲಾಗುವ ಮುಖಾಂತರ ಮುಂಬೈ ಗಾಳಿಯನ್ನು “ಉತ್ತಮ ವಿಭಾಗಕ್ಕೆ ಸೇರುವಂತೆ ಮಾಡಿದೆ. ಚಂಡಮಾರುತದ ರಭಸವಾದ ಗಾಳಿ ಹಾಗೂ ಸುರಿದ ಮಳೆಯು ಮುಂಬಯಿನ ಮಾಲಿನ್ಯಕಾರಕ ಅಂಶಗಳನ್ನು ತೊಳೆದು ಮುಂಬೈ ಜನತೆಗೆ ಆರೋಗ್ಯಯುತ ಗಾಳಿಯನ್ನು ದಯಪಾಲಿಸಿದೆ.

ಮನುಷ್ಯರಿಂದಾಗದ ಕಾರ್ಯಗಳನ್ನು ಪ್ರಕೃತಿ ತನ್ನಿಂದ ತಾನಾಗಿಯೇ ಮಾಡಿ ಕೊಳ್ಳುತ್ತಿದೆ. ಆದರೆ ಪ್ರಕೃತಿಯ ಈ ಅಸ್ತವ್ಯಸ್ತಗಳಿಗೆ ಹೊಣೆಗಾರರು ನಾವು ಎಂಬುದನ್ನು ಮರೆಯಬಾರದು. ಮರೆತರೆ ಈಗಿನಂತೆ ಪ್ರಕೃತಿಯೇ ನೆನಪಿಸುತ್ತಾಳೆ. ಕೆಲವೇ ದಿನಗಳಲ್ಲಿ ಕೋವಿಡ್‌ ಮಾಡಿದ ಮೋಡಿಯಿಂದ ಉಸಿರಾಡಲು ಸೂಕ್ತವಾಗಿರುವ ಸ್ವತ್ಛ ಗಾಳಿ, ನೀಲಾಕಾಶ ಲಭಿಸಿದೆ. ಇನ್ನೂ ಕಾಣದಂತೆ ಮರೆಯಾಗಿದ್ದ ಡಾಲ್ಫಿನ್‌ಗಳು ಮತ್ತೆ ತಮ್ಮ ದರುಶನ ನೀಡುತ್ತಿವೆ, ವಿಷಕಾರಕ ಅಂಶಗಳೇ ತುಂಬಿಕೊಂಡಿದ್ದ ನದಿಗಳು ತಿಳಿಯಾಗುತ್ತಿವೆ. ಸಾವಿರಾರು ಕೋಟಿ ರೂ.ಗಳಿಂದ ಸಾಧ್ಯವಾಗದೇ ಇರುವುದು ಇಂದು ಕೇವಲ ಒಂದು ವೈರಸ್‌ನಿಂದ ಸಾಧ್ಯವಾಗಿದೆ ಎಂದು ಪರಿಸರ ಪ್ರೇಮಿಗಳು ಹೇಳುತ್ತಿದ್ದಾರೆ.

ಮಾನವನ ಹಿತದೃಷ್ಟಿಯಿಂದ ಈ ವೈರಸ್‌ ಮಾರಕ ವಾಗಿದ್ದರೂ, ಪರಿಸರಕ್ಕೆ ಒಂದಷ್ಟು ಸಹಾಯ ಮಾಡಿದೆ ಎನ್ನಬಹುದು. ಮನುಷ್ಯನೇ ಈ ಅನಾಹುತಕ್ಕೆಲ್ಲ ಕಾರಣ ಎಂಬುದನ್ನು ಸ್ವತಃ ಆತನಿಗೆ ಅರಿ ವಾಗಿದೆ. ಆದರೆ ಇದ್ಯಾವುದೂ ಶಾಶ್ವತವಲ್ಲ, ಜಗತ್ತು ಪೂರ್ತಿ ಅನ್‌ಲಾಕ್‌ ಆಗುತ್ತಿದ್ದಂತೆಯೇ ಈ ಎಲ್ಲ ಸಮಸ್ಯೆಗಳು ಮರು ಕಳಿಸುವುದು ನಿಶ್ಚಿತ. ಆದರೆ ಸಮಸ್ಯೆಯ ಪ್ರಮಾಣವನ್ನು ಹತೋಟಿಯಲ್ಲಿಡುವುದು ನಮ್ಮ ಕೈಯಲ್ಲೇ ಇದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರ ಜತೆಗೆ, ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವಂತಹ, ನದಿ ಶುದ್ಧೀಕರಣ, ಪ್ಲಾಸ್ಟಿಕ್‌ ಬದಲು ಪರಿಸರ ಸ್ನೇಹಿ ವಸ್ತುಗಳ ಬಳಕೆಯ ಕುರಿತ ಮಾಹಿತಿ ನೀಡುವುದು ಅನಿವಾರ್ಯ. ಕೋವಿಡ್‌ ಅನಂತರ ಇಂತಹ ಯೋಜನೆಗಳನ್ನು ಅನುಷ್ಟಾನಗೊಳಿಸುವ ಜವಾಬ್ದಾರಿ ಜಗತ್ತಿನ ನಾಯಕರ ಮೇಲಿದೆ.

 ಶ್ರೀರಕ್ಷಾ ಶಿರ್ಲಾಲ್‌, ಆಳ್ವಾಸ್‌ ಕಾಲೇಜು ಮೂಡುಬಿದಿರೆ 

 

 

Advertisement

Udayavani is now on Telegram. Click here to join our channel and stay updated with the latest news.

Next