ಲಕ್ನೋ:ಹೊಸ ಮನೆ ಕಟ್ಟಲು ಅಡಿಪಾಯ ತೆಗೆಯುತ್ತಿದ್ದ ವೇಳೆ ನೂರು ವರ್ಷದ ಹಳೆಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಹಾರ್ಡೊಯಿ ಎಂಬಲ್ಲಿ ನಡೆದಿದೆ. ಆದರೆ ವಿಷಯ ತಿಳಿದ ಪೊಲೀಸರು ಭೂಮಿಯಲ್ಲಿ ಪತ್ತೆಯಾದ ಚಿನ್ನಾಭರಣ ವಶಪಡಿಸಿಕೊಂಡಿರುವುದಾಗಿ ಪಿಟಿಐ ವರದಿ ಮಾಡಿದೆ.
ಮನೆಯ ಅಡಿಪಾಯ ಅಗೆಯುವಾಗ ದೊರೆತ ನೂರಾರು ವರ್ಷಗಳ ಹಿಂದಿನ 650 ಗ್ರಾಮ್ ಚಿನ್ನ, 4.53 ಕೆಜಿ ಬೆಳ್ಳಿ ಆಭರಣಗಳ ದೊರೆತಿರುವುದಾಗಿ ಹಾರ್ಡೊಯಿ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.
ಪತ್ತೆಯಾದ ಚಿನ್ನಾಭರಣಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ನಾವು ಆ ವ್ಯಕ್ತಿಯಿಂದ ಅದನ್ನು ವಶಪಡಿಸಿಕೊಂಡಿರುವುದಾಗಿ ಪ್ರಿಯದರ್ಶಿ ಹೇಳಿದ್ದಾರೆ.
ಮನೆಯ ಅಡಿಪಾಯ ತೆಗೆಯುತ್ತಿದ್ದಾಗ ಚಿನ್ನಾಭರಣ ಸಿಕ್ಕಿದ ಸುದ್ದಿ ಇಡೀ ಗ್ರಾಮದ ತುಂಬಾ ಹರಡಿತ್ತು. ಹೀಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ ಮೊದಲು ನಿರಾಕರಿಸಿದ್ದು, ಬಳಿಕ ಚಿನ್ನಾಭರಣ ದೊರೆತ ವಿಷಯ ಬಾಯ್ಬಿಟ್ಟಿರುವುದಾಗಿ ವರದಿ ವಿವರಿಸಿದೆ.
ಭೂಮಿಯನ್ನು ಅಗೆಯುವಾಗ ಯಾವುದೇ ಚಿನ್ನಾಭರಣ ಅಥವಾ ಬೆಲೆಬಾಳುವ ವಸ್ತು ಪತ್ತೆಯಾದಲ್ಲಿ ಅದನ್ನು ನಿಧಿ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೇ ಇದು ಇಂಡಿಯನ್ ಟ್ರೆಶರ್ ಟ್ರೋವ್ ಕಾಯ್ದೆ 1878ರ ಸೆಕ್ಷನ್ 4ರ ಪ್ರಕಾರ ಸರಕಾರದ ವಶಕ್ಕೆ ಒಪ್ಪಿಸಬೇಕು.