ಲಕ್ನೋ: ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಬ್ಯಾಂಕ್ ಗೆ ತೆರಳಿ ಬರೋಬ್ಬರಿ 8.53 ಲಕ್ಷ ರೂಪಾಯಿ ನಗದನ್ನು ದರೋಡೆಗೈದು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಗೊಂಡಾದ ಪ್ರಥಮ ಯುಪಿ ಗ್ರಾಮೀಣ ಬ್ಯಾಂಕ್ ನಲ್ಲಿ ನಡೆದಿದ್ದು, ಘಟನೆಯು ಕ್ಯಾಶಿಯರ್ ಕೌಂಟರ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಅಂಕೋಲಾ: ವಿಗ್ರಹ ಕದ್ದೊಯ್ದು ಮನೆ ಹಿತ್ತಲಲ್ಲಿ ಪ್ರತಿಷ್ಠಾಪಿಸಿದ ಭೂಪ!
ಸಿಸಿಟಿವಿ ಫೂಟೇಜ್ ನಲ್ಲಿ, ಆರೋಪಿ ಹೆಲ್ಮೆಟ್ ಧರಿಸಿ ಕ್ಯಾಶಿಯರ್ ಕೌಂಟರ್ ಒಳಗೆ ನುಗ್ಗುವ ಮೊದಲು ಗ್ರಾಹಕನಂತೆ ನಿಂತಿದ್ದ. ನಂತರ ಗ್ರಾಹಕರೆಲ್ಲಾ ಹೊರಟು ಹೋದ ನಂತರ ದಿಢೀರನೆ ಕ್ಯಾಶಿಯರ್ ಕೌಂಟರ್ ಗೆ ನುಗ್ಗಿದ್ದ, ಕ್ಯಾಶಿಯರ್ ಆತನನ್ನು ತಡೆಯಲು ಯತ್ನಿಸಿದಾಗ, ಬ್ಯಾಗ್ ನೊಳಗಿದ್ದ ಚೂರಿಯನ್ನು ತೆಗೆದು ಆಕೆಯ ಕುತ್ತಿಗೆ ಬಳಿ ಹಿಡಿದು, ಹಣವನ್ನು ಬ್ಯಾಗ್ ಗೆ ತುಂಬುವಂತೆ ಹೇಳಿದ್ದ. ಬಳಿಕ ಆರೋಪಿ ಬ್ಯಾಂಕ್ ನಿಂದ ಹೊರಗೆ ಹೋಗಿ ಬೈಕ್ ನಲ್ಲಿ ಪರಾರಿಯಾಗಿರುವುದು ದಾಖಲಾಗಿದೆ.
ನಗರದ ವಿಐಪಿ ಪ್ರದೇಶದಲ್ಲಿರುವ ಪ್ರಥಮ ಯುಪಿ ಗ್ರಾಮೀಣ ಬ್ಯಾಂಕ್ ನಲ್ಲಿ ದರೋಡೆ ಪ್ರಕರಣ ನಡೆದಿದೆ. ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಮರೇಂದ್ರ ಪ್ರಸಾದ್ ಸಿಂಗ್ ಮತ್ತು ವಿನೀತ್ ಜೈಸ್ವಾಲ್ ಭೇಟಿ ನೀಡಿ, ತನಿಖೆಗೆ ಆದೇಶಿಸಿದ್ದರು.
ಬ್ಯಾಂಕ್ ಸಿಬಂದಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದ ಸಂಬಂಧ ಆರೋಪಿ ಬಂಧನಕ್ಕಾಗಿ ಐದು ಪೊಲೀಸರ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.