ನವದೆಹಲಿ: ಸುಮಾರು 45 ಲಕ್ಷ ರೂಪಾಯಿ ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಮುರಾದ್ ಅಲಾಂ ಎಂಬ ವ್ಯಕ್ತಿ ನೆಲಗಡಲೆ ಸಿಪ್ಪೆ, ಬಿಸ್ಕೆಟ್ ಪ್ಯಾಕೇಟ್ ಹಾಗೂ ಇತರ ವಸ್ತುಗಳ ಒಳಗೆ ನೋಟುಗಳನ್ನು ತುಂಬಿಸಿ ಕಳ್ಳಸಾಗಣೆ ಮಾಡಲು ಯತ್ನಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ನೋಟುಗಳನ್ನು ಸಣ್ಣ ಸುರುಳಿ ಸುತ್ತಿ ನೆಲಗಡಲೆ ಸಿಪ್ಪೆಯೊಳಗೆ ತುಂಬಿಸಿರುವುದನ್ನು ಹೊರತೆಗೆಯುತ್ತಿರುವ ವೀಡಿಯೋವನ್ನು ಭದ್ರತಾ ಏಜೆನ್ಸಿ ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದೆ. ಬಿಸ್ಕೆಟ್ ಮಧ್ಯೆ ನೋಟುಗಳನ್ನು ಇಟ್ಟಿರುವುದು ಕೂಡಾ ವಿಡಿಯೋದಲ್ಲಿದೆ.
ನೆಲಗಡಲೆ ಸಿಪ್ಪೆ, ಬಿಸ್ಕೆಟ್ ನಡುವೆ ವಿದೇಶಿ ಕರೆನ್ಸಿ ಅಡಗಿಸಿಟ್ಟು ದುಬೈಗೆ ತೆರಳುತ್ತಿದ್ದ ಅಲಾಂನನ್ನು ಬಂಧಿಸಿದ್ದು, ನಂತರ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ಭದ್ರತಾ ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ.