ನವದೆಹಲಿ: ಖ್ಯಾತ ವ್ಯಕ್ತಿಗಳ ಹೆಸರು, ಪರಿಚಯ ಹೇಳಿ ವಂಚಿಸುವವರ ಬಗ್ಗೆ ಆಗಾಗ್ಗೆ ವರದಿಯಾಗುತ್ತಿರುತ್ತದೇ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ. ಅಬುಧಾಬಿ ರಾಜಮನೆತನದ ಉದ್ಯೋಗಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ದೆಹಲಿಯ ಐಶಾರಾಮಿ ಹೋಟೆಲ್ ನಲ್ಲಿ ನಾಲ್ಕು ತಿಂಗಳ ಕಾಲ ವಾಸ್ತವ್ಯ ಹೂಡಿ…ಇದೀಗ 23 ಲಕ್ಷ ರೂಪಾಯಿ ಬಿಲ್ ಕಟ್ಟದೇ ನಾಪತ್ತೆಯಾಗಿರುವ ಪ್ರಕರಣ ದೆಹಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ವೇಶ್ಯಾವಾಟಿಕೆಗೆ ಜಾಲತಾಣದಲ್ಲಿದ್ದ ಯುವತಿಯ ಫೋಟೋಗಳ ಬಳಕೆ: ಆರು ಮಂದಿ ಬಂಧನ
ಪ್ರತಿಷ್ಠಿತ ಲೀಲಾ ಪ್ಯಾಲೇಸ್ ಹೋಟೆಲ್ ಮ್ಯಾನೇಜ್ ಮೆಂಟ್ ಮೊಹಮ್ಮದ್ ಷರೀಫ್ ಎಂಬಾತನ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಷರೀಫ್ ವಿರುದ್ಧ ವಂಚನೆ ಮತ್ತು ಕಳ್ಳತನದ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಆಗಸ್ಟ್ 1ರಂದು ಮೊಹಮ್ಮದ್ ಷರೀಫ್ ಲೀಲಾ ಪ್ಯಾಲೇಸ್ ಗೆ ಬಂದು ತನ್ನನ್ನು ಯುಎಇಯ ರಾಜಮನೆತನದ ಕೆಲಸಗಾರ ಎಂದು ಪರಿಚಯಿಸಿಕೊಂಡು ರೂಂ ನಂಬರ್ 427ರಲ್ಲಿ ವಾಸ್ತವ್ಯ ಹೂಡಿದ್ದ. ನವೆಂಬರ್ 20ರಂದು ಹೋಟೆಲ್ ರೂಂನಿಂದ ಕಾಲ್ಕಿತ್ತಿದ್ದ. ಆದರೆ ಷರೀಫ್ ಹೋಗುವಾಗಲೂ ಹೋಟೆಲ್ ರೂಂನಲ್ಲಿದ್ದ ಬೆಲೆಬಾಳುವ ಬೆಳ್ಳಿ ಪಾತ್ರೆ, ಮುತ್ತಿನ ತಟ್ಟೆ ಸೇರಿದಂತೆ ಹಲವಾರು ವಸ್ತುಗಳನ್ನು ಕದ್ದೊಯ್ದಿರುವುದಾಗಿ ವರದಿ ವಿವರಿಸಿದೆ.
ಲೀಲಾ ಪ್ಯಾಲೇಸ್ ಹೋಟೆಲ್ ಗೆ ಆಗಮಿಸಿದ್ದ ಷರೀಫ್, ತಾನು ಯುಎಇ ನಿವಾಸಿ ಎಂದು ತಿಳಿಸಿದ್ದು, ತಾನು ಶೇಕ್ ಫಾಲಾ ಬಿನ್ ಝಾಯೇದ್ ಅಲ್ ನಹ್ಯಾನ್ ಅವರ ಕುಟುಂಬದ ನಿಕಟವರ್ತಿಯಾಗಿದ್ದೆ ಎಂದು ತಿಳಿಸಿದ್ದ.
ತಾನು ಶೇಕ್ ಅವರ ಜತೆ ಕಾರ್ಯನಿರ್ವಹಿಸುತ್ತಿದ್ದು, ಅಧಿಕೃತ ಭೇಟಿಗಾಗಿ ಭಾರತಕ್ಕೆ ಬಂದಿರುವುದಾಗಿ ಷರೀಫ್ ಹೇಳಿಕೊಂಡಿದ್ದು, ತನ್ನ ಬ್ಯುಸಿನೆಸ್ ಕಾರ್ಡ್, ಯುಎಇ ನಿವಾಸಿ ಎಂಬುದಕ್ಕೆ ವಿಳಾಸ ಹಾಗೂ ಇನ್ನಿತರ ದಾಖಲೆಗಳನ್ನು ನೀಡಿದ್ದ. ಹೋಟೆಲ್ ನಲ್ಲಿದ್ದ ಸಿಬಂದಿಗಳ ಜೊತೆ ನಿರಂತರವಾಗಿ ಯುಎಇಯಲ್ಲಿನ ತನ್ನ ಜೀವನ, ಯಶೋಗಾಥೆ ಬಗ್ಗೆ ಹೇಳಿಕೊಳ್ಳುತ್ತಿದ್ದನಂತೆ.
ಇದೀಗ 23 ಲಕ್ಷ ರೂಪಾಯಿ ಬಿಲ್ ಕೊಡದೇ ನಾಪತ್ತೆಯಾಗಿರುವ ಷರೀಫ್ ನ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದು, ಇದು ನಕಲಿ ಎಂದು ತಿಳಿಸಿದ್ದಾರೆ. ನಾಲ್ಕು ತಿಂಗಳ ಹೋಟೆಲ್ ರೂಂ ಹಾಗೂ ಸರ್ವೀಸ್ ಬಿಲ್ ಸೇರಿ ಒಟ್ಟು 35 ಲಕ್ಷ ರೂಪಾಯಿ ಆಗಿತ್ತು. ಷರೀಫ್ 11.5 ಲಕ್ಷ ರೂಪಾಯಿ ಪಾವತಿಸಿ, ಉಳಿದ ಹಣ ಬಾಕಿ ಉಳಿಸಿಕೊಂಡಿದ್ದ. ನಂತರ ಹೋಟೆಲ್ ಸಿಬಂದಿಗೆ ನವೆಂಬರ್ 20ರ ದಿನಾಂಕ ನಮೂದಿಸಿ 20 ಲಕ್ಷ ರೂಪಾಯಿಗೆ ಚೆಕ್ ನೀಡಿದ್ದ. ಕುತೂಹಲದ ಸಂಗತಿ ಅಂದರೆ ಷರೀಫ್ ನ.20ರಂದೇ ಹೋಟೆಲ್ ನಿಂದ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.