ನವದೆಹಲಿ: ತಾನೋರ್ವ ವಿದೇಶದಲ್ಲಿರುವ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ಬರೋಬ್ಬರಿ 4 ತಿಂಗಳು ದೆಹಲಿಯ ಐಷಾರಾಮಿ ಹೋಟೆಲೊಂದರಲ್ಲಿ ತಂಗಿದ್ದ ವ್ಯಕ್ತಿ ಹೋಟೆಲ್ ಗೆ ಪಾವತಿಸಬೇಕಾದ 23 ಲಕ್ಷ ಪಾವತಿಸದೆ ಪರಾರಿಯಾಗಿರುವ ಘಟನೆ ನಡೆದಿದೆ.
ದೆಹಲಿಯ ಸರೋಜಿನಿ ನಗರದಲ್ಲಿರುವ ಐಷಾರಾಮಿ ಹೋಟೆಲ್ ಲೀಲಾ ಪ್ಯಾಲೇಸ್ ಗೆ ಈ ವ್ಯಕ್ತಿ ಬರೋಬ್ಬರಿ 23 ಲಕ್ಷ ಮೊತ್ತ ಪಾವತಿಸದೆ ತಲೆಮರೆಸಿಕೊಂಡಿದ್ದಾನೆ.
ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ಕುರಿತು ಪ್ರಕರಣ ದಾಖಲಾಗಿದೆ.
ವಂಚನೆ ಎಸಗಿದ ವ್ಯಕ್ತಿಯನ್ನು ಮಹಮ್ಮದ್ ಶರೀಫ್ ಎನ್ನಲಾಗಿದ್ದು, ಕಳೆದ ಆಗಸ್ಟ್ 1 ರಂದು ಲೀಲಾ ಪ್ಯಾಲೇಸ್‌ನಲ್ಲಿ 11.5 ಲಕ್ಷ ಪಾವತಿಸಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದ ಬಳಿಕ ನವೆಂಬರ್ 20 ರಂದು ಇದ್ದಕಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಇದುವರೆಗೆ ನಾಲ್ಕು ತಿಂಗಳ ಕಾಲ ಕೊಠಡಿಯಲ್ಲಿ ವಾಸ್ತವ್ಯ ಹೊಂದಿದ್ದು ಊಟೋಪಚಾರ ಸೇರಿ ಎಲ್ಲಾ ಸೇವೆಗಳ ಬಿಲ್ ಮೊತ್ತ 35 ಲಕ್ಷ ಆಗಿತ್ತು ಅದರಲ್ಲಿ 11.5 ಲಕ್ಷ ಪಾವತಿಸಿದ್ದು ಉಳಿದ 23 ಲಕ್ಷ ಹಣವನ್ನು ನೀಡದೆ ಜೊತೆಗೆ ರೂಮ್ ನಲ್ಲಿದ್ದ ಬೆಳ್ಳಿ ಪಾತ್ರೆಗಳು ಮತ್ತು ಮುತ್ತಿನ ತಟ್ಟೆ ಸೇರಿದಂತೆ ಹಲವು ದುಬಾರಿ ವಸ್ತುಗಳನ್ನು ಕದ್ದಿರುವುದಾಗಿ ಹೋಟೆಲ್ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಸರೋಜಿನಿ ನಗರ ಪೊಲೀಸರು ಆರೋಪಿಯ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬಾಲ್ಯ ವಿವಾಹ ತಡೆಗೆ ಗ್ರಾಮಮಟ್ಟದಲ್ಲಿ ರಕ್ಷಣಾ ಸಮಿತಿ ರಚನೆ: ನಾಗಣ್ಣ ಗೌಡ