ಮೂಡುಬಿದಿರೆ: ತೆಂಗಿನಕಾಯಿ ಕೀಳಲೆಂದು ಯಂತ್ರ ಬಳಸಿ ಮರವೇರಿದ್ದ ಕಾರ್ಮಿಕರೋರ್ವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲಿನಲ್ಲಿ ರವಿವಾರ ಸಂಭವಿಸಿದೆ.
ವಾಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಅಳಿಯೂರು ಕಂಪೊಟ್ಟು ನಿವಾಸಿ ಸಂದೇಶ್ (44) ಮೃತರು.
ಅವರು ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಬಳಿಯ ಇಸಾಕ್ ಅವರ ಮನೆಗೆ ತೆಂಗನಕಾಯಿ ಕೀಳಲು ಬಂದಿದ್ದರು. ಯಂತ್ರವನ್ನು ಬಳಸಿ ತೆಂಗಿನ ಕಾಯಿಗಳನ್ನು ಕೀಳಲು ಮರವೇರಿದ್ದ ಅವರು ನಿಯಂತ್ರಣ ತಪ್ಪಿ ಕೆಳಗಡೆ ಇದ್ದ ಕಲ್ಲಿನ ಮೇಲೆ ಬಿದ್ದ ಪರಿಣಾಮವಾಗಿ ತಲೆಗೆ ಏಟಾಗಿದ್ದು ಅಲ್ಲಿಯೇ ಸಾವನ್ನಪ್ಪಿದ್ದಾರೆ.
ಮೂಲತಃ ಕೇರಳದ ಇಡುಕ್ಕಿ ನಿವಾಸಿಯಾಗಿರುವ ಮೃತರು ಪತ್ನಿಯನ್ನು ಅಗಲಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.