Advertisement

Gangolli:ಭಾರೀ ಗಾಳಿ ಮಳೆ-15ಕ್ಕೂ ಅಧಿಕ ವಿದ್ಯುತ್‌ ಕಂಬ ಧರಾಶಾಹಿ, 2 ದಿನ ವಿದ್ಯುತ್‌ ಇಲ್ಲ

01:08 PM Jul 25, 2024 | Team Udayavani |

ಗಂಗೊಳ್ಳಿ: ಕುಂದಾಪುರ ತಾಲೂಕಿನಲ್ಲಿ ಬುಧವಾರ (ಜುಲೈ 24) ರಾತ್ರಿ ಸುರಿದ ಭಾರೀ ಸುಂಟರಗಾಳಿ ಮಳೆಯಿಂದಾಗಿ ಹಲವಾರು ವಿದ್ಯುತ್‌ ಕಂಬಗಳು, ಮರಗಳು ಉರುಳಿ ಬಿದ್ದಿರುವ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಂತಹ ಘಟನೆ ನಡೆದಿಲ್ಲ.

Advertisement

ಗಂಗೊಳ್ಳಿ, ದಾಕುಹಿತ್ಲು, ಮೀನುಪೇಟೆ, ಗುಜ್ಜಾಡಿ, ನಾಯಕವಾಡಿ ಸೇರಿದಂತೆ ಸುತ್ತಮುತ್ತ ಸುಮಾರು 15ರಿಂದ 20 ವಿದ್ಯುತ್‌ ಕಂಬಗಳು ತುಂಡಾಗಿ ಬಿದ್ದಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದಲೇ ಕರೆಂಟ್‌ ಇಲ್ಲದಂತಾಗಿದೆ.

ಗಂಗೊಳ್ಳಿಯ ದಾಕುಹಿತ್ಲುವಿಗೆ ತೆರಳುವ ದಾರಿಯಲ್ಲಿ ದೊಡ್ಡ ಮಾವಿನ ಮರ ಬಿದ್ದಿದ್ದು, ಇದರಿಂದ ದಿನನಿತ್ಯ ಓಡಾಟ ನಡೆಸುವವರು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದ್ದು, ಈಗ ಮರವನ್ನು ಕಡಿದು ತೆರವುಗೊಳಿಸುವ ಕಾರ್ಯ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದಾಕುಹಿತ್ಲು ಪ್ರದೇಶದಲ್ಲಿ ನಾಲ್ಕು ವಿದ್ಯುತ್‌ ಕಂಬಗಳು, ಮೀನುಪೇಟೆ ಸುತ್ತಮುತ್ತ 4 ಕಂಬಗಳು ಸೇರಿದಂತೆ 20ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಹಾಗೂ ಇತರೆಡೆ ಮರಗಳು ಬಿದ್ದು ವಿದ್ಯುತ್‌ ಲೈನ್‌ ಗಳಿಗೆ ಹಾನಿಯಾಗಿದೆ.

Advertisement

ಭಾರೀ ಪ್ರಮಾಣದಲ್ಲಿ ವಿದ್ಯುತ್‌ ಕಂಬಗಳು ಹಾಗೂ ತಂತಿಗಳು ಕಡಿದು ಬಿದ್ದಿರುವುದರಿಂದ ಇವುಗಳ ರಿಪೇರಿಗೆ ಹೆಚ್ಚಿನ ಸಮಯ ತಗುಲಲಿದ್ದು, ಗಂಗೊಳ್ಳಿ, ಗುಜ್ಜಾಡಿ, ನಾಯಕವಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು-ಮೂರು ದಿನಗಳ ಕಾಲ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಮೆಸ್ಕಾಂ ಮೂಲಗಳು ತಿಳಿಸಿವೆ.

ಭಾರೀ ಸುಂಟರಗಾಳಿ ಮಳೆಗೆ ಕುಂದಾಪುರ ತಾಲೂಕಿನ 12 ಮನೆಗಳು ಹಾನಿಗೊಂಡಿದ್ದು, ನಾಲ್ಕು ಲಕ್ಷ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ. ಬೈಂದೂರಿನಲ್ಲಿ ಎರಡು ಪ್ರಕರಣಗಳು ನಡೆದಿದ್ದು, 1.75 ಲಕ್ಷ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಬುಧವಾರ ಸರಾಸರಿ 45.7 ಮಿ.ಮೀ. ಮಳೆಯಾಗಿದ್ದು, ಬೈಂದೂರಿನಲ್ಲಿ ಅತ್ಯಧಿಕ 63.6 ಮೀ. ಮಳೆಯಾಗಿದೆ. ಕುಂದಾಪುರದಲ್ಲಿ 53.3 ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 60.5 ಮಿ.ಮೀಟರ್‌, ಕಾರ್ಕಳದಲ್ಲಿ 36.9, ಕಾಪು 32.9. ಬ್ರಹ್ಮಾವರ 26.5, ಉಡುಪಿಯಲ್ಲಿ 24.1 ಮಿ.ಮೀ. ಮಳೆಯಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:Sandalwood: ರಾಜ್‌ ಶೆಟ್ಟಿ ʼರೂಪಾಂತರʼ ಮೆಚ್ಚಿದ ಸ್ಟಾರ್ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್

Advertisement

Udayavani is now on Telegram. Click here to join our channel and stay updated with the latest news.

Next