ಬೆಂಗಳೂರು: ಮೊಮ್ಮಗಳನ್ನು ಜತೆಯಲ್ಲಿ ಕಳುಹಿಸುವಂತೆ ಕೇಳಿದ ಅತ್ತೆಯನ್ನು ಅಳಿಯನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿ ನಡೆದಿದೆ.
ಕೆಜಿಎಫ್ ಮೂಲದ ಮಾರಿಕೊಪ್ಪಂ ನಿವಾಸಿ ಏಳಲ್ ಅರಸಿ (48) ಕೊಲೆಯಾದವರು. ಘಟನೆಯಲ್ಲಿ ಈಕೆಯ ಕಿರಿಯ ಮಗಳು ಸಿಂಧೂ ಅರಸಿ (29) ಗಾಯಗೊಂಡಿದ್ದಾರೆ. ಕೃತ್ಯ ಎಸಗಿದ ಅಳಿಯ, ಕೆಜಿಎಫ್ ನ ಬೆಮೆಲ್ ನಗರ ನಿವಾಸಿ ದಿವಾಕರ್ (38) ತಲೆಮರೆಸಿಕೊಂಡಿದ್ದಾನೆ.
ಆರೋಪಿ ದಿವಾಕರ್ ಮತ್ತು ಏಳನ್ ಅರಸಿ ಪುತ್ರಿ ತಮಿಳ್ ಅರಸಿ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕೆಜಿಎಫ್ ನ ಬೆಮೆಲ್ ನಗರದಲ್ಲಿ ದಂಪತಿ ವಾಸವಾಗಿದ್ದರು. ಈ ಮಧ್ಯೆ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಪತ್ನಿ ಮೇಲೆ ಆರೋಪಿ ಹಲ್ಲೆ ಕೂಡ ನಡೆಸುತ್ತಿದ್ದ. ಹೀಗಾಗಿ ಬೇಸತ್ತಿದ್ದ ತಮಿಳ್ ಅರಸಿ, ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಹಿರಿಯರ ಸಮ್ಮುಖದಲ್ಲಿ ರಾಜಿ-ಸಂಧಾನ ಮಾಡಲಾಗಿತ್ತು. ಕೆಲ ದಿನಗಳ ಬಳಿಕ ಮತ್ತೆ ಪತ್ನಿ ಜತೆ ಆರೋಪಿ ಜಗಳ ಆರಂಭಿಸಿದ್ದ. ಇತ್ತೀಚೆಗೆ ತಮಿಳ್ ಅರಸಿ ತವರು ಮನೆಗೆ ಹೋಗಿದ್ದರು. ಆದರೆ, ಪತಿ ಮನೆಗೆ ಬರಲು ತಡವಾಗಿದೆ. ಅದರಿಂದ ಕೋಪಗೊಂಡ ಆರೋಪಿ, ಒಬ್ಬ ಮಗಳನ್ನು ಕರೆದುಕೊಂಡು ಕೆಂಗೇರಿಯ ನಾಗದೇವ ನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿರುವ ಸಹೋದರಿ ಆಶಾ ಮನೆಗೆ ಬಂದಿದ್ದಾನೆ. ಪತ್ನಿಗೆ ಕರೆ ಮಾಡಿ ಪುತ್ರಿಯನ್ನು ಕೊಲೆಗೈಯುವುದಾಗಿ ಬೆದರಿಸಿದ್ದಾನೆ. ಅದರಿಂದ ಗಾಬರಿಗೊಂಡ ತಮಿಳ್ ಅರಸಿ, ತನ್ನ ತಾಯಿ ಏಳನ್ ಅರಸಿಗೆ ಈ ವಿಚಾರ ತಿಳಿಸಿದ್ದಾರೆ.
ಹೀಗಾಗಿ ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಏಳನ್ ಅರಸಿ, ಪುತ್ರಿ ಸಿಂಧೂ ಅರಸಿ ಸೇರಿ ನಾಲ್ಕೈದು ಮಂದಿ ದಿವಾಕರ್ ಸಹೋದರಿ ಆಶಾ ಮನೆಗೆ ಬಂದಿದ್ದಾರೆ. ಮೊಮ್ಮಗಳಿಗೆ ಪರೀಕ್ಷೆ ಇದೆ. ತಮ್ಮೊಂದಿಗೆ ಕಳುಹಿಸುವಂತೆ ಅತ್ತೆ ಏಳನ್ ಅರಸಿ ಕೇಳಿದ್ದಾರೆ. ಆದರೆ, ಆರೋಪಿ ನಿರಾಕರಿಸಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ, ಆರೋಪಿ ಚಾಕುವಿನಿಂದ ಅತ್ತೆಯ ಕುತ್ತಿಗೆ ಭಾಗಕಕ್ಕೆ ಇರಿದಿದ್ದಾನೆ. ತಡೆಯಲು ಬಂದ ಪುತ್ರಿ ಸಿಂಧೂ ಅರಸಿಗೂ ಗಾಯವಾಗಿದೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದ ಏಳನ್ ಅರಸಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಪರೀಕ್ಷಿಸಿದ ವೈದ್ಯರ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಮೊಮ್ಮಗಳಿಗೆ ಪರೀಕ್ಷೆ ಇದೆ ತಮ್ಮೊಂದಿಗೆ ಕಳುಹಿಸುವಂತೆ ಕೇಳಿದ ಅತ್ತೆಯನ್ನೇ ಕೊಲೆಗೈದ ಘಟನೆ ಸಂಬಂಧ ಕೆಂಗೇರಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ.
-ಲಕ್ಷ್ಮಣ್ ನಿಂಬರಗಿ, ಪಶ್ಚಿಮ ವಿಭಾಗ ಡಿಸಿಪಿ