ಹೈದರಾಬಾದ್: ಬುರ್ಖಾ ಧರಿಸಿ ಆಭರಣದ ಮಳಿಗೆಗೆ ಬಂದ ಇಬ್ಬರು ಡಕಾಯಿತರು ದೋಚಲು ವಿಫಲ ಯತ್ನ ನಡೆಸಿದ ಘಟನೆ ಹೈದರಾಬಾದ್ ಹೊರವಲಯದ ಮೆದಾಚಲ್ ನಲ್ಲಿ ನಡೆದಿದೆ. ಜುವೆಲ್ಲರಿ ಶಾಪ್ ಮಾಲಕ ಮತ್ತು ಆತನ ಮಗ ಸೇರಿ ದರೋಡೆಕೋರರ ಸಂಚನ್ನು ವಿಫಲಗೊಳಿಸಿದ್ದಾರೆ.
ಚೂರಿಯೊಂದಿಗೆ ದೋಚಲು ಬಂದಿದ್ದ ಇಬ್ಬರು ಭಾರಿ ಪ್ರಯತ್ನ ನಡೆಸಿದರೂ ಖಾಲಿ ಕೈಯಲ್ಲಿ ಹೋಗಿದ್ದಾರೆ. ಘಟನೆಯಲ್ಲಿ ಮಳಿಗೆ ಮಾಲಕ ಗಾಯಗೊಂಡಿದ್ದಾರೆ.
ಮಧ್ಯಾಹ್ನ 1:45 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ತಮ್ಮ ಗುರುತುಗಳನ್ನು ಮರೆಮಾಚಿಕೊಂಡು ಅಂಗಡಿಗೆ ನುಗ್ಗಿ ದರೋಡೆ ಯತ್ನ ನಡೆಸಿದ್ದಾರೆ. ಬುರ್ಖಾ ಧರಿಸಿದ್ದ ವ್ಯಕ್ತಿ ತಕ್ಷಣ ಅಂಗಡಿ ಮಾಲೀಕ ಶೇಷಾರಾಮ್ ಮೇಲೆ ಹಲ್ಲೆ ನಡೆಸಿ ಭುಜಕ್ಕೆ ಚಾಕುವಿನಿಂದ ಇರಿದಿದ್ದಾನೆ., ಹೆಲ್ಮೆಟ್ ಧರಿಸಿದ್ದ ಆತನ ಸಹಚರ ಆಭರಣ ಮತ್ತು ನಗದು ಸಂಗ್ರಹಿಸಲು ಪ್ರಾರಂಭಿಸಿದನು.
ಗಾಯಗೊಂಡರೂ ಶೇಷಾರಾಮ್ ಕೂಡಲೇ ಎಚ್ಚೆತ್ತುಕೊಂಡರು. ಅಲ್ಲದೆ ಅವರ ಪುತ್ರ ಸುರೇಶ್ ಕೂಡಲೇ ಮಧ್ಯಪ್ರವೇಶಿಸಿದ ಕಾರಣ ದೊಡ್ಡ ದರೋಡೆಯೊಂದು ತಪ್ಪಿದೆ.
ಸಹಾಯಕ್ಕಾಗಿ ಜೋರಾಗಿ ಕೂಗಿದ ಸುರೇಶ್ ಅವರು ದರೋಡೆಕೋರರ ಮೇಲೆ ಕುರ್ಚಿಗಳನ್ನು ಎಸೆದರು. ಇದರಿಂದ ದರೋಡೆಕೋರರು ಕದ್ದ ಮಾಲನ್ನು ಬಿಟ್ಟು ಓಡಿಹೋಗುವಂತೆ ಮಾಡಿದರು. ಪೊಲೀಸರು ಸ್ಥಳಕ್ಕಾಗಮಿಸುವ ಮುನ್ನವೇ ಕಳ್ಳರು ಮೋಟಾರು ಬೈಕ್ ನಲ್ಲಿ ಪರಾರಿಯಾಗಿದ್ದು, ನಾಪತ್ತೆಯಾಗಿದ್ದಾರೆ.
ದರೋಡೆಕೋರರು ಬೈಕ್ ನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿರುವಾಗ ಅಂಗಡಿಯ ಹೊರಗೆ ಶೇಷಾರಾಮ್ ಅವರನ್ನು ಹಿಂಬಾಲಿಸುತ್ತಿರುವುದನ್ನು ಘಟನೆಯ ವೀಡಿಯೊಗಳು ತೋರಿಸುತ್ತವೆ. ಸುರೇಶ್ ಕೂಡ ಕುರ್ಚಿಯನ್ನು ಹಿಡಿದುಕೊಂಡು ಅಂಗಡಿಯಿಂದ ದರೋಡೆಕೋರನತ್ತ ಓಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಥಳೀಯ ಪೊಲೀಸ್ ಠಾಣೆಯಿಂದ ಕೇವಲ 25 ಮೀಟರ್ ದೂರದಲ್ಲಿ ದರೋಡೆ ನಡೆದಿದೆ. ಅಲ್ಲದೆ, ಸಮೀಪದಲ್ಲಿ ನಡೆಯುತ್ತಿರುವ ಮೇಲ್ಸೇತುವೆಯ ನಿರ್ಮಾಣ ಕಾರ್ಯದಿಂದ ಸುತ್ತಮುತ್ತಲಿನ ಸುಮಾರು 25 ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಲಾಗಿದೆ. ದರೋಡೆಕೋರರು ಕೈಗವಸುಗಳನ್ನು ಧರಿಸಿದ್ದರಿಂದ ಯಾವುದೇ ಬೆರಳಚ್ಚು ಬಿಟ್ಟು ಹೋಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.