ಬಾಗ್ಧಾದ್: ಇರಾಕ್ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ನೆನಪಿಗೆಂದು 12 ಸಣ್ಣ ಕಲ್ಲುಗಳನ್ನು ಸಂಗ್ರಹಿಸಿಕೊಂಡು ಬಂದಿದ್ದ ವ್ಯಕ್ತಿಗೆ ಕಲಾಕೃತಿ ಕಳ್ಳಸಾಗಣೆ ಆರೋಪದಲ್ಲಿ ಇರಾಕ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
ಬ್ರಿಟನ್‌ನ ಭೂವಿಜ್ಞಾನಿಯಾಗಿರುವ ಜಿಮ್ ಫಿಟ್ಟನ್(66) ಮಾರ್ಚ್‌ನಲ್ಲಿ ಇರಾಕ್‌ಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿನ ಎರಿದು ಪ್ರದೇಶಕ್ಕೆ ತೆರಳಿದ ಅವರು ಅಲ್ಲಿಂದ 12 ಸಣ್ಣ ಕಲ್ಲುಗಳು ಮತ್ತು ಮಡಕೆಯ ಚೂರುಗಳನ್ನು ಸಂಗ್ರಹಿಸಿಕೊಂಡು ಹೊರಟಿದ್ದರು. ಅವರಿಗೆ ಜರ್ಮನಿಯ ವೋಲ್ಕರ್ ವಾಲ್ಡ್‌ಮನ್ ಕೂಡ ಸಾಥ್ ಕೊಟ್ಟಿದ್ದರು.
ಅಲ್ಲಿಂದ ವಾಪಸು ಸ್ವದೇಶಕ್ಕೆ ತೆರಳುವಾಗ ಅವರಿಬ್ಬರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಅವರನ್ನು ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿದೆ.
ಅಲ್ಲಿ ಫಿಟ್ಟನ್ ಅವರು, ತಾವು ಯಾವುದೇ ದುರುದ್ದೇಶದಿಂದ ಈ ಕೆಲಸ ಮಾಡಿಲ್ಲ. ಇರಾಕ್‌ನಲ್ಲಿ ಕಲಾಕೃತಿ ಕಳ್ಳಸಾಗಣೆ ನಿಯಮವಿದೆ ಎನ್ನುವುದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
22ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಫಿಟ್ಟನ್‌ಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.