ಪರಿಸರ ನಮ್ಮೆಲ್ಲರ ತಾಯಿ ಎನ್ನುತ್ತೇವೆ, ಆದರೆ ನಾವು ತಾಯಿಗೆ ನೀಡಬೇಕಾದ ಗೌರವವನ್ನು ಯಾವತ್ತಾದರು ನೀಡಿದ್ದೇವಾ ಎಂಬ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಮನುಷ್ಯರಾದ ನಾವುಗಳು ಪ್ರಕೃತಿಗೆ ನಾವು ಮಾತ್ರ ಮಕ್ಕಳು, ಪ್ರಕೃತಿ ನಮಗಾಗಿಯೇ ಇರುವುದು ಎಂಬ ಭ್ರಮೆಯಲ್ಲಿದ್ದೇವೆ. ಆದರೆ ಸತ್ಯ ಕಹಿಯಾಗಿದೆ. ಈ ವಿಶ್ವದ ಎಂಬತ್ನಾಲ್ಕು ಲಕ್ಷ ಜೀವರಾಶಿಗಳ ಪೈಕಿ ಮನುಷ್ಯನೂ ಒಬ್ಬ ಅಷ್ಟೆ!
ತೇಜಸ್ವಿ ಒಂದು ಕಡೆ ಹೀಗೆ ಹೇಳಿದ್ದಾರೆ, ಯಾವ ಪ್ರಕೃತಿಯಲ್ಲಿ ಒಂದು ಹಕ್ಕಿ ಬದುಕಲು ಸಾಧ್ಯವಿಲ್ಲವೋ ಆ ಪ್ರಕೃತಿಯಲ್ಲಿ ಮನುಷ್ಯನೂ ಬದುಕಲು ಸಾಧ್ಯವಿಲ್ಲ ಎಂದು. ಯಾಕೆಂದರೆ ಪ್ರಕೃತಿಗೆ ಮನುಷ್ಯ ಮತ್ತು ಉಳಿದ ಜೀವರಾಶಿಗಳ ಮಧ್ಯೆ ಭೇದ ಭಾವ ಇಲ್ಲ. ಪ್ರಕೃತಿಗೆ ನಾವೆಲ್ಲರೂ ಮಕ್ಕಳೇ. ಅದು ಕೆಲವೇ ನಿಮಿಷಗಳಷ್ಟು ಕಾಲ ಬದುಕುವ ಕಣ್ಣಿಗೆ ಕಾಣದ ಕೀಟದಿಂದ ಹಿಡಿದು ನೂರಾರು ವರ್ಷಗಳ ಕಾಲ ಬದುಕುವ ಜೀವಿಗಳ ವರೆಗೆ.
ಯಾವಾಗಲೂ ಒಂದು ಸಂಗತಿ ಕಾಡುತ್ತಲೇ ಇರುತ್ತದೆ. ಅಂತಹಾ ದೈತ್ಯಾಕಾರದ ಬಲಿಷ್ಟ ಶಕ್ತಿಶಾಲಿಯಾದ ಡೈನೋಸಾರ್‌ಗಳು ಈ ಭೂಮಿಯಿಂದ ನಾಶವಾಗಿರುವಾಗ ಇನ್ನು ಈ ಮನುಷ್ಯ ಯಾವ ಲೆಕ್ಕ ಎಂದು. ಆದರೆ ಡೈನೋಸಾರ್‌ಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗಿ ಕೊನೆಗೊಮ್ಮೆ ಸಂಪೂರ್ಣ ನಾಶವಾದವು. ಪ್ರಕೃತಿಗೂ ಹಾಗಾಗಬೇಕು ಎಂಬ ಯಾವ ಆಕಾಂಕ್ಷೆಯೂ ಇರಲಿಕ್ಕಿಲ್ಲ, ಏಕೆಂದರೆ ಅವು ಪ್ರಕೃತಿಗೆ ಯಾವ ಹಾನಿಯನ್ನೂ ಮಾಡಿಲ್ಲ. ಆದರೆ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ಅತ್ಯಾಚಾರ, ಅನಾಚಾರ ಮಿತಿಮೀರಿದೆ. ಪ್ರಕೃತಿಯೇ ನಮ್ಮನ್ನು ನಾಶ ಮಾಡುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಒಮ್ಮೊಮ್ಮೆ ಹಾಗೇ ಆಗಿಬಿಡಲಿ ಅನಿಸಿಬಿಡುವುದಂಟು. ಈ ಲೋಕದಲ್ಲಿ ಮುಂದೆ ಜೀವತಳೆಯುವ ಪ್ರಬೇಧವಾದರೂ ಮನುಷ್ಯನ ಮೂರ್ಖತನದಿಂದ ಪಾಠ ಕಲಿಯಬಹುದೇನೋ.
ಎಲ್ಲರೂ ಹೇಳುವುದಿದೆ ಇನ್ನೂ ಕಾಲ ಮಿಂಚಿಲ್ಲ, ಕಾಲ ಮಿಂಚಿಲ್ಲ ಎಂದು. ಆದರೆ ನಿಜಸ್ಥಿತಿ ಹಾಗಿಲ್ಲ. ಕಾಲ ಮಿಂಚಿ ಹೋಗಿದೆ, ನಮ್ಮ ನಾಶವನ್ನು ನಾವೇ ಹತ್ತಿರ ತಂದುಕೊಂಡಿದ್ದೇವೆ. ಪ್ರಕೃತಿಗೆ ಆದ ಗಾಯ ಇನ್ನು ಮಾಸುವುದು ಕಷ್ಟಸಾಧ್ಯ. ಮನುಷ್ಯ ಪ್ರಭೇದ ನಾಶವಾಗುವ ಹಂತಕ್ಕೆ ಬಂದೇ ಬಿಟ್ಟಿದೆ. ಆದರೆ ನಮ್ಮ ಆರ್ಭಟ ಮುಂದುವರಿಯುತ್ತಲೇ ಇದೆ. ನೆನಪಿಡಿ ದೀಪ ಆರುವ ಮೊದಲು ಜೋರಾಗಿ ಉರಿಯುತ್ತದೆ.
-ಲತೇಶ ಸಾಂತ
ಮಂಗಳೂರು