ಹೈದರಾಬಾದ್: ಗ್ರಾಹಕ ಮತ್ತು ಹೋಟೆಲ್ ಸಿಬ್ಬಂದಿ ನಡುವಿನ ವಾಗ್ವಾದ ಸಾವಿನಲ್ಲಿ ಅಂತ್ಯವಾದ ಘಟನೆ ಭಾನುವಾರ ರಾತ್ರಿ (ಸೆ.10 ರಂದು) ಹೈದರಾಬಾದ್ ಪುಂಜಗುಟ್ಟಾ ಪ್ರದೇಶದಲ್ಲಿ ನಡೆದಿದೆ.
ಪುಂಜಗುಟ್ಟಾ ಪ್ರದೇಶದಲ್ಲಿರುವ ಮೆರಿಡಿಯನ್ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ.
ಘಟನೆ ಹಿನ್ನೆಲೆ: ಲಿಯಾಕತ್ ಎನ್ನುವ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಗೆ ಬಂದಿದ್ದರು. ಈ ವೇಳೆ ಅವರು ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಬಿರಿಯಾನಿ ತಿನ್ನುತ್ತಾ ಅವರು ಹೊಟೇಲ್ ಸಿಬ್ಬಂದಿ ಅವರ ಬಳಿ ಎಕ್ಸ್ಟ್ರಾ ರಾಯಿತಾ (ಸಾಲಡ್) ಕೇಳಿದ್ದಾರೆ. ಇದೇ ವಿಚಾರವಾಗಿ ಹೊಟೇಲ್ ಸಿಬ್ಬಂದಿ ಹಾಗೂ ಗ್ರಾಹಕನ ನಡುವೆ ವಾಗ್ವಾದ ಉಂಟಾಗಿದೆ. ಲಿಯಾಕತ್ ಅವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಹೊಟೇಲ್ ಸಿಬ್ಬಂದಿಗಳು ಹಾಗೂ ಬಂದಿದ್ದ ಗ್ರಾಹಕರ ಗುಂಪಿನ ನಡುವೆ ಈ ವಿಚಾರವಾಗಿ ಜಗಳ ಉಂಟಾಗಿದೆ. ಪರಸ್ಪರ ಗಲಾಟೆ ಮಾಡಿಕೊಂಡ ಪರಿಣಾಮ ಹಲ್ಲೆ ನಡೆಸಿದ್ದಾರೆ.
ರಾತ್ರಿ 11 ಗಂಟೆ ಸುಮಾರಿಗೆ ಪಂಜಗುಟ್ಟ ಪೊಲೀಸ್ ಠಾಣೆಗೆ ತೆರಳಿ ಸಮಸ್ಯೆ ಬಗೆಹರಿಸಲು ಎರಡೂ ಗುಂಪಿನವರು ಬಂದಿದ್ದಾರೆ. ಆದರೆ ಠಾಣೆಯ ಸಮೀಪಕ್ಕೆ ಬರುತ್ತಿದ್ದಂತೆ ಲಿಯಾಕತ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಎದೆನೋವು ಕಾಣಿಸಿಕೊಂಡು ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಆದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಹೋಟೆಲ್‌ನ ಮ್ಯಾನೇಜರ್ ಸೇರಿದಂತೆ ಹೋಟೆಲ್ ಸಿಬ್ಬಂದಿ ಲಿಕಾಯತ್‌ಗೆ ತೀವ್ರವಾಗಿ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ತೀವ್ರವಾಗಿ ಹಲ್ಲೆಗೆ ಒಳಗಾದ ಪರಿಣಾಮ ಅವರಿಗೆ ಹೃದಯ ಸ್ತಂಭನ ಉಂಟಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಶಂಕಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸಾವಿನ ಕಾರಣ ತಿಳಿದು ಬರಲಿದೆ ಎಂದು ವರದಿ ತಿಳಿಸಿದೆ.
ಸದ್ಯ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.