ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುವ ನಿಟ್ಟಿನಲ್ಲಿ ಆರೋಪಿಯೊಬ್ಬ ಬಿಬಿಎಂಪಿ ಎಇಇ ಮುಖ್ಯ ಕಾರ್ಯದರ್ಶಿ ಸೋಗಿನಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಗೆ ಅಕ್ರಮವಾಗಿ ಪ್ರವೇಶಿಸಿ ಹೈಗ್ರೌಂಡ್ಸ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪರಮೇಶ್ವರ್ (30) ಬಂಧಿತ. ಆ.17ರಂದು ಬೆಳಗ್ಗೆ 11.15ರಲ್ಲಿ ಪರಮೇಶ್ವರ್ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಬಂದಿದ್ದ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಬಳಿ ತಾನು ಬಿಬಿಎಂಪಿ ಎಇಇ ಮುಖ್ಯ ಕಾರ್ಯದರ್ಶಿ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ. ಕೃಷ್ಣಾದಲ್ಲಿ ಮೀಟಿಂಗ್ ಇರುವುದಾಗಿ ಹೇಳಿ ಒಳಗೆ ಪ್ರವೇಶಿಸಿದ್ದ.
ನಂತರ ಆತನ ವರ್ತನೆ ಕಂಡು ಅನುಮಾನಗೊಂಡ ಪೊಲೀಸ್ ಸಿಬ್ಬಂದಿ ಈ ವಿಚಾರವನ್ನು ಕೃಷ್ಣಾದ ಭದ್ರತಾಧಿಕಾರಿ ರಾಘವೇಂದ್ರ ರಾಮ್ ತಾಳ್ ಗಮನಕ್ಕೆ ತಂದಿದ್ದರು. ಇವರು ಪರಮೇಶ್ವರ್‌ನನ್ನು ವಿಚಾರಣೆ ನಡೆಸಿ ಆತನ ಐಡಿ ಕಾರ್ಡ್ ಪರಿಶೀಲಿಸಿದಾಗ, ಆತನ ಐಡಿ ಕಾರ್ಡ್ ಹಾಗೂ ಚಾಲನಾ ಪರವಾನಗಿಯಲ್ಲಿ ಬೇರೆ ಬೇರೆ ವಿಳಾಸ ಇರುವುದು ಕಂಡು ಬಂದಿತ್ತು. ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ, ಮೇಲಧಿಕಾರಿಗಳ ಬಗ್ಗೆ ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದ. ಇದಲ್ಲದೇ, ಆರೋಪಿ ಹೇಳಿದಂತೆ ಕೃಷ್ಣದಲ್ಲಿ ಮೀಟಿಂಗ್ ಇದೆಯೇ ಎಂದು ಪರಿಶೀಲಿಸಿದಾಗ ಯಾವುದೇ ಮೀಟಿಂಗ್ ಇಲ್ಲದಿರುವುದು ಗೊತ್ತಾ ಗಿದೆ. ನಂತರ ಆತನ ಐಡಿಕಾರ್ಡ್ ಪರಿಶೀಲಿಸಿದಾಗ ನಕಲಿ ಎಂಬುದು ತಿಳಿದು ಬಂದಿತ್ತು. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಫೋಟೋ ತೆಗೆಸಿಕೊಳ್ಳಲು ಕೃಷ್ಣಾಗೆ ಎಂಟ್ರಿ: ಪೊಲೀಸರು ಪರಮೇಶ್ವರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಸರ್ಕಾರಿ ಕೆಲಸ ಕೊಡಿಸುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಸುಳಿವು ಸಿಕ್ಕಿದೆ. ಕೃಷ್ಣಾದಲ್ಲಿ ಫೋಟೋ ತೆಗೆಸಿಕೊಂಡು, ಆ ಫೋಟೋವನ್ನು ಸಾರ್ವಜನಿಕರಿಗೆ ತೋರಿಸಿ ತನಗೆ ಕೆಲ ಪ್ರಭಾವಿ ಸಚಿವರು ಪರಿಚಯ ಎಂದು ಬಿಂಬಿಸಿ, ಅವರ ಮೂಲಕ ಉದ್ಯೋಗ ಕೊಡಿಸುವ ನೆಪದಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದ.
ಫೋಟೋ ತೆಗೆಸಿಕೊಳ್ಳುವ ಉದ್ದೇಶದಿಂದ ಆರೋಪಿ ಕೃಷ್ಣಾಗೆ ಪ್ರವೇಶಿಸಿರುವುದು ಮೇಲ್ನೋಟಕ್ಕೆ ತನಿ ಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಆತನ ವಿರುದ್ಧ ವಂಚನೆಗೊಳಗಾದವರು ಠಾಣೆಗೆ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.