ಬೆಂಗಳೂರು: ಸಾಮಾಜಿಕ ಜಾಲತಾಣಗಳು ಹಾಗೂ ಡೇಟಿಂಗ್ ಆ್ಯಪ್‌ಗಳಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಹಳ್ಳಿಯ ಸುಹಾಸ್ ಹರಿಪ್ರಸಾದ್ (34) ಬಂಧಿತ. ಆರೋಪಿ ಕಳೆದ ಎಂಟು ವರ್ಷಗಳ ಹಿಂದೆಯೇ ಮದುವೆ ಆಗಿದ್ದು ಪತ್ನಿ ಜತೆ ವಾಸವಾಗಿದ್ದಾನೆ. ಐಷಾರಾಮಿ ಜೀವನ ನಡೆಸುವ ಸಲುವಾಗಿ ಯುವತಿಯರಿಗೆ ನಂಬಿಸಿ ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಸಾಮಾಜಿಕ ಜಾಲತಾಣಗಳು ಹಾಗೂ ಡೇಟಿಂಗ್ ಆ್ಯಪ್ ಗಳಲ್ಲಿ ಅಕೌಂಟ್ ತೆರೆಯುತ್ತಿದ್ದ ಆರೋಪಿ ಸುಹಾಸ್, ಈಗಾಗಲೇ ಉದ್ಯೋಗದಲ್ಲಿರುವ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕ ಆಡುತ್ತಿದ್ದ. ಜತೆಗೆ, ತಾನು ಅಮೆರಿಕಾ, ಕೆನಡಾದಲ್ಲಿ ಆಟೋಮೊಬೈಲ್ ಉದ್ಯಮ ನಡೆಸುತ್ತಿರುವುದಾಗಿ ನಂಬಿಸುತ್ತಿದ್ದ. ಬಳಿಕ ಮದುವೆ ಆಗುವುದಾಗಿ ನಂಬಿಸುತ್ತಿದ್ದ. ಬಳಿಕ ಕೆಲವೇ ದಿನಗಳಲ್ಲಿ ತನಗೆ ಉದ್ಯಮ ನಡೆಸಲು ಸ್ವಲ್ಪ ಹಣ ಬೇಕು ಎಂದು ಅವರಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಾರು ಖರೀದಿಸಿ ಸಿಕ್ಕಿಬಿದ್ದ: ರೀನಾ ( ಹೆಸರು ಬದಲಿಸಲಾಗಿದೆ) ಎಂಬ ಯುವತಿಗೆ ಮದುವೆ ಆಗುವುದಾಗಿ ನಂಬಿಸಿದ್ದ ಸುಹಾಸ್ ಕಡಿಮೆ ಬೆಲೆಗೆ ಸಿಗುವ ಕಾರು ಖರೀದಿಗಿದೆ. ಅದನ್ನು ಖರೀದಿಸಲು ಹಣ ಬೇಕು ಎಂದು ನಂಬಿಸಿ 12 ಲಕ್ಷ ರೂ. ಪಡೆದು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಸುತ್ತಾಡಿಕೊಂಡಿದ್ದ. ಕೆಲ ದಿನಗಳ ಹಿಂದೆ ಆರೋಪಿ ಸುಹಾಸ್ ಫೋಟೋಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬರು ಲೈಕ್ ಕೊಟ್ಟಿದ್ದರು. ಇದನ್ನ ಗಮನಿಸಿದ ರೀನಾ, ಆ ಯುವತಿಯನ್ನು ಸಂಪರ್ಕಿಸಿದಾಗ ಸುಹಾಸ್ ಆಕೆಯನ್ನೂ ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿದೆ. ಜತೆಗೆ ಮದುವೆ ಆಗುವುದಾಗಿ ನಂಬಿಸಿ
ಆಕೆಯಿಂದಲೂ ಒಂದು ಲಕ್ಷ ರೂ.ಗಳಿಗೂ ಅಧಿಕ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಸುಹಾಸ್ ಕುರಿತೂ ಇನ್ನೂ ಪರಿಶೀಲನೆ ನಡೆಸಿದಾಗ ವಿಜಯನಗರದ ಮತ್ತೂಬ್ಬ ಯುವತಿಗೂ ಮದುವೆ ನೆಪದಲ್ಲಿ ಹಣ ಪಡೆದು ವಂಚಿಸಿರುವ ವಿಚಾರ ತಿಳಿದಿದೆ. ಇದರಿಂದ ರೀನಾ, ಸುಹಾಸ್‌ನನ್ನು ಸಂಪರ್ಕಿಸಿ ತನ್ನ ಬಳಿ ಪಡೆದಿರುವ ಹಣ ವಾಪಾಸ್ ನೀಡುವಂತೆ ಕೇಳಿದಾಗ ಆತ ಪ್ರಾಣಬೆದರಿಕೆ ಹಾಕಿದ್ದಾನೆ. ಅಂತಿಮವಾಗಿ ಮೋಸ ಹೋದ ರೀನಾ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇನ್ನೂ ಹಲವು ಯುವತಿಯರಿಗೆ ವಂಚಿಸಿರುವುದು ಗೊತ್ತಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.