Advertisement

ಎಟಿಎಂ ಕಾರ್ಡ್‌ ಬದಲಿಸಿ ವಂಚಿಸುತ್ತಿದ್ದ ವ್ಯಕ್ತಿ ಬಂಧನ

05:30 PM Jan 09, 2022 | Team Udayavani |

ಸಿಂಧನೂರು: ಎಟಿಎಂಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಒಬ್ಬನನ್ನು ಪೊಲೀಸರು ಶುಕ್ರವಾರ ಬಲೆಗೆ ಕೆಡವಿದ್ದಾರೆ.

Advertisement

ಕೋಲಾರ ಜಿಲ್ಲೆಯ ಅರಕುಂಟಿ ಗ್ರಾಮದ ನಾರಾಯಣಸ್ವಾಮಿ (41) ಎಂಬಾತ ಬಂಧಿತ. ಈತನ ಬಳಿ 20 ಎಟಿಎಂ ಕಾರ್ಡ್‌ಗಳು ದೊರಕಿವೆ. 40 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ.

ಪೊಲೀಸ್‌ ಸಿಬ್ಬಂದಿ ಸಂಗನಗೌಡ ಎಂಬಾತ ನಿರಂತರ ನಿಗಾ ಇಟ್ಟು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬೆನ್ನತ್ತಿ ನೀಡಿದ ಸುಳಿವು ಆಧರಿಸಿ ಈ ಪ್ರಕರಣ ಬಯಲಿಗೆಳೆಯಲಾಗಿದೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಏನಿದು ವಂಚನೆ ತಂತ್ರ?

ಎಲ್ಲ ಬ್ಯಾಂಕ್‌ನ ಎಟಿಎಂಗಳನ್ನು ಹೋಲುವ ಕಾರ್ಡ್‌ ಜತೆಗೆ ಇಟ್ಟುಕೊಂಡು ಎಟಿಎಂನೊಳಗೆ ಹೋಗುವ ವಂಚಕರು, ಅನಕ್ಷರಸ್ಥರು, ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಪಿನ್‌ ನಂಬರ್‌ ಒತ್ತಿ, ನಂತರ ಬೇರೆ ಆಪ್ಷನ್‌ ಬಳಸಿ ಹಣ ಬಂದಿಲ್ಲವೆಂದು ಅದೇ ಬಣ್ಣದ ಕಾರ್ಡ್‌ ಬದಲಿಸಿ ಕೊಡುತ್ತಿದ್ದರು. ಬಳಿಕ ಬೇರೆ ಎಟಿಎಂಗಳಿಗೆ ತೆರಳಿ ದಿಢೀರ್‌ ಹಣ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಹತ್ತಾರು ಜನರು ಇಂತಹ ವಂಚನೆ ಬಲೆಗೆ ಬಿದ್ದರೂ ಕಳ್ಳರನ್ನು ಹಿಡಿಯುವುದು ದುಸ್ತರವಾಗಿತ್ತು.

Advertisement

ತನಿಖಾ ತಂಡ ರಚನೆ

ಇಂತಹ ಪ್ರಕರಣದ ವಿಷಯದಲ್ಲಿ ಯಾರಿಗೆ ದೂರಬೇಕೆಂಬ ಗೊಂದಲಕ್ಕೆ ಬೀಳುತ್ತಿದ್ದ ಜನ ಬೇಸರ ವ್ಯಕ್ತಪಡಿಸುತ್ತಿದ್ದರು. ಇದನ್ನು ಬೇಧಿಸಲು ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನದಲ್ಲಿ ಪ್ರೋಬೆಷನರಿ ಡಿವೈಎಸ್ಪಿ ಆರ್‌.ಲಕ್ಷ್ಮೀಕಾಂತ್‌, ಸಿಪಿಐ ಉಮೇಶ್‌ ಕಾಂಬಳೆ, ಪಿಎಸ್‌ಐ ಸೌಮ್ಯ, ಸಿಬ್ಬಂದಿ ಸಂಗನಗೌಡ, ಆದಯ್ಯ, ಅನಿಲ್‌ ಕುಮಾರ್‌, ಚಾಂದಾಪಾಷಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಇವರು ತನಿಖೆ ನಡೆಸಿ ಎಟಿಎಂ ಕಾರ್ಡ್‌ ಬದಲಿಸುವ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊನೆಗೂ ಆಸಕ್ತಿ ತೋರಿದ ಪೊಲೀಸರು

ಅಮಾಯಕರ ಎಟಿಎಂ ಕಾರ್ಡ್‌ ಬದಲಿಸಿ ವಂಚನೆ ಮಾಡುತ್ತಿದ್ದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದವು. ಇದೇ ಮೊದಲ ಬಾರಿಗೆ ಅಂತಹ ಒಂದು ಪ್ರಕರಣದಲ್ಲಿ ಕೋಲಾರ ಜಿಲ್ಲೆಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ನೀಡುವುದಕ್ಕೆ ಆಯಾ ಬ್ಯಾಂಕ್‌ ಮ್ಯಾನೇಜರ್‌ಗಳಿಗೆ ಅವಕಾಶ ಇರಲಿಲ್ಲ. ಅವರು ಮೇಲಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಪಡೆಯುವಷ್ಟರಲ್ಲಿ ವಾರ ಹಿಡಿಯುತ್ತಿತ್ತು. ಬಳಿಕ ತನಿಖೆ ನಡೆಸಬೇಕಿತ್ತು. ಇಂತಹ ವಿಳಂಬ ಕಾರಣಕ್ಕೆ ಬಹುತೇಕರು ದೂರು ನೀಡದೇ ಉಳಿಯುತ್ತಿದ್ದರು. ಈ ಬಾರಿ ಪ್ರಕರಣ ಬೇಧಿಸುವ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next