ವಿಜಯವಾಡ:ಮೊಬೈಲ್ ಚಾರ್ಜ್ ಗೆ ಹಾಕಿ ಮಾತನಾಡುತ್ತಿದ್ದ ವೇಳೆ ಹೈವೋಲ್ಟೇಜ್ ನಿಂದಾಗಿ ಶಾಕ್ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ವಾಗುಪಲ್ಲಿಯ ಕಾನಿಗಿರಿ ಮಂಡಲ್ ನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಮೃತಪಟ್ಟ ಯುವಕನನ್ನು ಚಾಂಗು ಮಸ್ತಾನ್ ರೆಡ್ಡಿ (31) ಎಂದು ಗುರುತಿಸಲಾಗಿದೆ. ವಿಕಲಚೇತನನಾಗಿದ್ದ ಈ ಯುವಕ ಒಂಟಿಯಾಗಿ ವಾಸಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಸ್ತಾನ್ ರೆಡ್ಡಿ ಮೊಬೈಲ್ ಫೋನ್ ಅನ್ನು ಎಡಗೈಯಲ್ಲಿ ಹಿಡಿದ ಸ್ಥಿತಿಯಲ್ಲಿಯೇ ನೆಲದ ಮೇಲೆ ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಸ್ತಾನ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ಕಾನಿಗಿರಿ ಸಬ್ ಇನ್ಸ್ ಪೆಕ್ಟರ್ ಯು ಶ್ರೀನಿವಾಸುಲು ಮಾಧ್ಯಮಕ್ಕೆ ವಿವರಿಸಿದ್ದಾರೆ.
ಸೋಮವಾರ ನೆರೆಹೊರೆಯವರು ಎಲೆಕ್ಟ್ರಿಕ್ ವಯರ್ ಸುಟ್ಟು ಹೋದ ವಾಸನೆ ಬಂದಿದ್ದರಿಂದ ಬಂದು ನೋಡಿದ ಸಂದರ್ಭದಲ್ಲಿ ಮಸ್ತಾನ್ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಈತನ ತಂದೆ, ತಾಯಿ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಈಗ ಒಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದು, ಸರ್ಕಾರ ತಿಂಗಳಿಗೆ ನೀಡುವ ಒಂದು ಸಾವಿರ ರೂಪಾಯಿ ಪಿಂಚಣಿಯೇ ಆತನ ಆದಾಯವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.