ಲಕ್ನೋ: ಕೊಲೆ ಆರೋಪಿಯನ್ನು ನ್ಯಾಯಾಲಯದೊಳಗೆ ಗುಂಡಿಟ್ಟು ಹತ್ಯೆಗೈದ ಘಟನೆ ಮಂಗಳವಾರ ಉತ್ತರಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶದ ಬಿಜ್ನೋರ್ ನಲ್ಲಿ ಇಂದು ಮಧ್ಯಾಹ್ನ ನ್ಯಾಯಾಲಯದೊಳಗೆ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಇದ್ದ ವೇಳೆಯೇ ಆರೋಪಿ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಕೊಲೆ ಪ್ರಕರಣದ ಆರೋಪಿ ಶಹನವಾಜ್ ಅನ್ಸಾರಿಯನ್ನು ಪೊಲೀಸರು ಬಿಜ್ನೋರ್ ಜಿಲ್ಲಾ ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಪಿಸ್ತೂಲ್ ಹಿಡಿದು ಬಂದ ಮೂವರು ಕೋರ್ಟ್ ನೊಳಗೆ ಆರೋಪಿಯನ್ನು ಗುಂಡಿಟ್ಟು ಕೊಂದಿದ್ದರು ಎಂದು ವರದಿ ತಿಳಿಸಿದೆ.
ಕೂಡಲೇ ಮೂವರನ್ನು ಹಿಂಬಾಲಿಸಿ ಹೋದ ಪೊಲೀಸರು ಕೋರ್ಟ್ ಆವರಣದೊಳಗೆ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಏಕಾಏಕಿ ಘಟನೆ ನಡೆದಿರುವುದನ್ನು ಕಂಡ ನ್ಯಾಯಾಧೀಶರು, ವಕೀಲರು ಹಾಗೂ ಕೋರ್ಟ್ ಸಿಬ್ಬಂದಿಗಳು ಆಘಾತಕ್ಕೊಳಗಾಗಿದ್ದರು ಎಂದು ಸ್ಥಳೀಯ ವರದಿ ತಿಳಿಸಿದೆ.
ಕೋರ್ಟ್ ನಲ್ಲಿ ಆರೋಪಿಗೆ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಈ ಕುರಿತು ವಾದ ಮಂಡಿಸಲಾಗಿತ್ತು. ದಿಢೀರನೆ ಬಂದ ಮೂವರು ಏಕಾಏಕಿ ಗುಂಡು ಹಾರಿಸಿಬಿಟ್ಟಿದ್ದರು. ಒಬ್ಬ ವ್ಯಕ್ತಿ (ಆರೋಪಿ) ನೆಲದ ಮೇಲೆ ಬಿದ್ದುಬಿಟ್ಟಿದ್ದನ್ನು ನಾನು ಗಮನಿಸಿದ್ದೇನೆ. ಎಲ್ಲವೂ ಸಿನಿಮೀಯ ರೀತಿಯಲ್ಲಿ ನಡೆದು ಹೋಗಿತ್ತು ಎಂದು ವಕೀಲ ಅತುಲ್ ಸಿಸೋಡಿಯಾ ತಿಳಿಸಿದ್ದಾರೆ.