ಮಲಯಾಳಂ ಸಿನೆಮಾ ತಂಡ ಮತ್ತೆ ಮಂಗಳೂರಿಗೆ ಆಗಮಿಸಿದೆ. ಕೇರಳವನ್ನೇ ಬೆಚ್ಚಿಬೀಳಿಸಿದ ಮೂರು ದಶಕಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದನ್ನು ಆಧರಿಸಿ ನಿರ್ಮಿಸುತ್ತಿರುವ “ಕುರುಪ್’ ಸಿನೆಮಾದ ಶೂಟಿಂಗ್ ಮಂಗಳೂರಿನಲ್ಲಿ ನಡೆದಿದೆ. ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ಪುತ್ರ ಡಿಕ್ಯೂ ಎಂದೇ ಜನಪ್ರಿಯನಾಗಿರುವ ದುಲ್ಖರ್ ಸಲ್ಮಾನ್ ಅಭಿ ನಯದ ಈ ಸಿನೆಮಾದ ಶೂಟಿಂಗ್ ನಗರದ ಬಂದರು, ದಕ್ಕೆ ಸೇರಿ ದಂತೆ ಮಂಗಳೂರು ನಗರ ವ್ಯಾಪ್ತಿ ಯಲ್ಲಿ ಕಳೆದ ಒಂದು ವಾರ ನಡೆದಿದೆ.
ಅಂದ ಹಾಗೆ; ಮಲಯಾಳಂ ಸಿನೆಮಾ ಶೂಟಿಂಗ್ ಇದೇ ಮೊದಲು ಮಂಗಳೂರಿನಲ್ಲಿ ನಡೆಯುತ್ತಿಲ್ಲ. ಈ ಹಿಂದೆ ಹಲವು ಮಲಯಾಳಂ ಸಿನೆಮಾಗಳು ನಗರದಲ್ಲಿ ನಡೆದಿದೆ. ಅದರಲ್ಲಿಯೂ ನಿವಿನ್ ಪೌಳಿ, ಮೋಹನ್‌ಲಾಲ್ ಅಭಿನಯದ “ಕಾಯಂಕುಲಂ ಕೊಚ್ಚುನ್ನಿ’ ಸಿನೆಮಾದ ಬಹುತೇಕ ಚಿತ್ರೀಕರಣ ಕರಾವಳಿ ಭಾಗದಲ್ಲಿಯೇ ನಡೆದಿತ್ತು.
ಮಮ್ಮುಟ್ಟಿ ಅಭಿನಯದ “ಗ್ಯಾಂಗ್‌ಸ್ಟಾರ್’ ಸಿನೆಮಾ ಮಂಗಳೂರಿನ ಎನ್‌ಎಂಪಿಟಿ, ಮೀನುಗಾರಿಕೆ ಧಕ್ಕೆ ಸೇರಿದಂತೆ ವಿವಿಧೆಡೆಗಳಲ್ಲಿ ಶೂಟಿಂಗ್ ಕಂಡಿತ್ತು. ಟೊವಿನೋ ಥೋಮಸ್ ಮುಖ್ಯಭೂಮಿಕೆಯ ಆಶಿಶ್ ನಿರ್ದೇಶನದ “ಮಾಯಾನದಿ’ ಸಿನೆಮಾ ಅಲೋಶಿಯಸ್ ಕಾಲೇಜು, ಮೀನುಗಾರಿಕಾ ವ್ಯಾಪ್ತಿ ಸೇರಿದಂತೆ ಮಂಗಳೂರು ವ್ಯಾಪ್ತಿಯಲ್ಲಿ ಶೂಟಿಂಗ್ ಕಂಡಿತ್ತು. ಪೃಥ್ವಿರಾಜ್ ಮುಖ್ಯ ತಾರಾಗಣದ “ವಿಮಾನ’ ಸಿನೆಮಾವೂ ಮಂಗಳೂರಿನಲ್ಲಿ ಶೂಟಿಂಗ್
ಕಂಡಿದೆ. ಜತೆಗೆ ಜಯಸೂರ್ಯ ಮುಖ್ಯ ನಟನೆಯ “ಇನ್‌ಸ್ಪೆಕ್ಟರ್ ದಾವೂದ್ ಇಬ್ರಾಹಿಂ’ (ಇ.ಡಿ) ಚಿತ್ರವೂ ಮಂಗಳೂರು ವ್ಯಾಪ್ತಿಯಲ್ಲಿಯೇ ಶೂಟಿಂಗ್ ಆಗಿದೆ.
– ದಿನೇಶ್ ಇರಾ