Advertisement

ಬಸಿರಾ ಎದುರು ಮಂಡಿಯೂರಿದ ಮಮತಾ

12:13 PM Sep 23, 2019 | Team Udayavani |

ಗದಗ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆದ ದಸರಾ ಬೆಳಗಾವಿ ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.

Advertisement

ಅಂತಾರಾಷ್ಟ್ರೀಯ ಕುಸ್ತಿಪಟು ಮಮತಾ ಕೇಲೋಜಿ ಅವರನ್ನು ತಿಂಗಳಲ್ಲಿ ಸತತ ಎರಡನೇ ಬಾರಿಗೆ ಮಣಿಸುವ ಮೂಲಕ ಆತಿಥೇಯ ಕುಸ್ತಿಪಟು ಬಸಿರಾ ವಕಾರದ ಗಮನ ಸೆಳೆದರು. 57 ಕೆಜಿ ಪುರುಷ ಹಾಗೂ 50 ಕೆಜಿ ಮಹಿಳಾ ವಿಭಾಗದ ಅಂತಿಮ ಪಂದ್ಯಗಳು   ರಣರೋಚಕವಾಗಿದ್ದವು. ಮಹಿಳಾ ವಿಭಾಗದ ಅಂತಿಮ ಪಂದ್ಯದಲ್ಲಿ ಕಾರವಾರದ ಅಂತಾರಾಷ್ಟ್ರೀಯ ಕುಸ್ತಿಪಟು ಮಮತಾ ಕೇಲೋಜಿ ಅವರನ್ನು ಗದುಗಿನ ಬಸಿರಾ ವಕಾರದ 8-2 ಅಂಕಗಳೊಂದಿಗೆ ಮಣಿಸಿದರು. 6 ನಿಮಿಷಗಳ ಕಾದಾಟ ಹೆಜ್ಜೆ ಹೆಜ್ಜೆಗೂ ರೋಮಾಂಚನಕಾರಿಯಾಗಿತ್ತು.

ಕಟ್ಟುಮಸ್ತಾದ ದೇಹ ಬೆಳೆಸಿಕೊಂಡಿದ್ದ ಜಟ್ಟಿಗಳು ಪರಸ್ಪರ ಚಿತ್ತು ಮಾಡಲು ಹರಸಾಹಸ ನಡೆಸಿದರು. ಬಸಿರಾ ವಕಾರದ ಅವರು ಲೆಗ್‌ ಅಟ್ಯಾಕ್‌ ಮಾಡಿ ಎರಡು ಅಂಕ ಬಾಚಿಕೊಂಡು ಗೆಲುವಿನ ಹಾದಿ ಹಿಡಿದರು. ಇದಕ್ಕೆ ತಡೆಯೊಡ್ಡಲು ಯತ್ನಿಸಿದ ಮಮತಾ, ಬಸಿರಾ ಅವರನ್ನು ಕಾಲರ್‌ ಸ್ವಿಂಗ್‌ ಮಾಡಿ ಎರಡು ಅಂಕಗಳನ್ನು ಪಡೆಯುವಲ್ಲಿ ಮಾತ್ರ ಸಫಲರಾದರು. ನಿಗದಿತ ಅವಧಿಯುದ್ದಕ್ಕೂ ನಡೆದ ಕಾಳಗದಿಂದಾಗಿ ಹೈವೋಲ್ಟೆಜ್‌ ಪಂದ್ಯವಾಗಿ ಮಾರ್ಪಟ್ಟಿತು. ಅಂತಿಮವಾಗಿ ಬಸಿರಾ ವಕಾರದ ಗೆಲುವಿನ ಕೇಕೆ ಹಾಕಿದರು.

2017-18ನೇ ಸಾಲಿನಲ್ಲಿ ರೆಸ್ಲಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ ನಡೆಸಿದ್ದ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದ ಕಾರವಾರದ ಮಮತಾ ಕೇಲೋಜಿ, ಅಂತಾರಾಷ್ಟ್ರೀಯ ಪಟು ಎಂಬ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದ್ದರು. ಆದರೆ, ಕಳೆದ ಆಗಸ್ಟ್‌ ತಿಂಗಳಲ್ಲಿ ರಾಜ್ಯ ರೆಸ್ಲಿಂಗ್‌ ಅಸೋಸಿಯೇಷನ್‌ ಆಯೋಜಿಸಿದ್ದ ರಾಜ್ಯಮಟ್ಟದ ರೆಸ್ಲಿಂಗ್‌ ಪಂದ್ಯದಲ್ಲೂ ಮಮತಾ ಅವರನ್ನು ಮಣಿಸಿರುವ ಬಸಿರಾ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದೀಗ ದಸರಾ ಕ್ರೀಡಾಕೂಟದ ಬೆಳಗಾವಿ ವಿಭಾಗ ಮಟ್ಟದ ಪಂದ್ಯಾವಳಿಯಲ್ಲೂ ಬಸಿರಾ ಎದುರು ಮಮತಾ ಮಂಡಿಯೂರಿದ್ದಾರೆ. ಬಸಿರಾ ಕುಸ್ತಿ ವಲಯದಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದಾರೆ ಎನ್ನುತ್ತಾರೆ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಧಿಕಾರಿ ಬಿ.ಬಿ. ವಿಶ್ವನಾಥ. ಪ್ರವೀಣ ವಿಜಯದುಂದುಭಿ: ಪುರುಷರ ವಿಭಾಗದ 57 ಕೆಜಿ ವಿಭಾಗದ ಅಂತಿಮ ಪಂದ್ಯದಲ್ಲಿ ಧಾರವಾಡದ ಪ್ರವೀಣ ಎಸ್‌.ಕೆ. ಹಾಗೂ ಕಾರವಾರದ ನಾರಾಯಣ ಎ. ನಡುವೆ ಕಾದಾಟ ರೋಚಕವಾಗಿತ್ತು.

Advertisement

6 ನಿಮಿಷಗಳ ಕಾಲ ನಡೆದ ಬಲ ಪ್ರದರ್ಶನದಲ್ಲಿ ಅಂತಿಮವಾಗಿ ಪ್ರವೀಣ ಎಸ್‌.ಕೆ. ಜಯಶಾಲಿಯಾದರು. ಮಹಿಳೆಯರ 53 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಕುಸ್ತಿಪಟು ಎನಿಸಿರುವ ಗದುಗಿನ ಪ್ರೇಮಾ ಹುಚ್ಚಣ್ಣವರ ಹಾಗೂ ಬೆಳಗಾವಿ ಐಶ್ವರ್ಯ ಕರಿಗಾರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತಾದರೂ, ಕೊನೆಗೆ ಪ್ರೇಮಾ ಹುಚ್ಚಣ್ಣವರ ಗೆಲುವಿನ ನಗೆ ಬೀರಿದರು. ಇನ್ನುಳಿದಂತೆ ಬಹುತೇಕ ಪಂದ್ಯಗಳು 2-3 ನಿಮಿಷಗಳ ಕಾಲ ನಡೆದರೆ, ಕೆಲವರು ಆರಂಭಿಕ ಹಂತದಲ್ಲೇ ಮುಗ್ಗರಿಸಿದರು. ಇನ್ನೂ ಕೆಲವರು ಕೆಲವೇ ಕ್ಷಣಗಳಲ್ಲಿ ಸೋಲೊಪ್ಪಿಕೊಂಡು ಅಖಾಡದಿಂದ ಹೊರನಡೆದರು.

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next