Advertisement

ಮಮತಾ ಕೋಟೆ ಕಾಯಬೇಕಿದ್ದ ದೊಣ್ಣೆ ನಾಯಕ..!

12:59 AM Mar 07, 2021 | Team Udayavani |

ಚದುರಂಗದ ಆಟವೇ ಹಾಗೆ. ಒಬ್ಬನಿಗೆ ಮತ್ತೂಬ್ಬ ಚೆಕ್‌ ನೀಡುವುದು, ಅದಕ್ಕೆ ಪ್ರತಿಯಾಗಿ ಮತ್ತೂಬ್ಬ ದಾಳಿ ನಡೆಸುವುದು ಅಥವಾ ತನ್ನ ದಾಳವನ್ನು ಉರುಳಿಸುವುದು. ರಾಜಕಾರಣದಲ್ಲೂ ಅದೇ. ಈಗ ಪಂಚ ರಾಜ್ಯಗಳಲ್ಲಿ ಚುನಾವಣೆಯ ಕಾವು ಇದ್ದರೂ ನೆತ್ತಿಯನ್ನು ಸುಡುತ್ತಿರುವುದು ಪಶ್ಚಿಮ ಬಂಗಾಲದಲ್ಲಿ. ಉಳಿದಂತೆ ತಮಿಳುನಾಡು, ಕೇರಳ, ಪುದುಚೇರಿ, ಅಸ್ಸಾಂನಲ್ಲಿ ಇನ್ನೂ ಚುನಾವಣ ರವಿ ಏಳುತ್ತಿದ್ದಾನಷ್ಟೇ.

Advertisement

ಶುಕ್ರವಾರ ಪಶ್ಚಿಮ ಬಂಗಾಲದಲ್ಲಿ ಮಮತಾ ನಂದಿಗ್ರಾಮದಲ್ಲಿ ತನ್ನ ಸ್ಪರ್ಧೆಯನ್ನು ಘೋಷಿಸುವ ಮೂಲಕ ವಿರೋಧಿ ಪಾಳಯದೊಳಗೆ ನುಗ್ಗಿ ಅಬ್ಬರಿಸಿದ್ದರು. ಇದೊಂದು ಪ್ರಮುಖವಾದ ನಡೆಯೆಂದೇ ಅರ್ಥೈಸಲಾಗಿತ್ತು. ಈಗ ಬಿಜೆಪಿ ಕೋಟೆಗೆ ಮಮತಾರ ಅರಮನೆಯಿಂದ ಮತ್ತೂಂದು ಆನೆ ವಲಸೆ ಹೋಗಿದೆ.

ದಿನೇಶ್‌ ತ್ರಿವೇದಿ ಹಳೆಯ ಹೆಸರು. ಪಶ್ಚಿಮ ಬಂಗಾಲದಲ್ಲಿ ಹಿಂದಿ ಭಾಷಿಗರ ಮುಖವಾಣಿಯಂತೆ ಇದ್ದವರು. ಮೂಲ ಗುಜರಾತ್‌. ಅವರ ತಂದೆ ದೇಶ ವಿಭಜನೆ ಸಂದರ್ಭದಲ್ಲಿ ಕರಾಚಿಯಿಂದ ಬಂದು ಗುಜರಾತ್‌ನಲ್ಲಿ ನೆಲೆ ಊರಿದವರು. ತಂದೆ ಕೋಲ್ಕತ್ತಾದ ಕಂಪೆನಿಯಲ್ಲಿ ಕೆಲಸಕ್ಕೆ ಇದ್ದ ಕಾರಣ, ದಿನೇಶ್‌ ಓದಿದ್ದು, ಬೆಳೆದದ್ದೆಲ್ಲ ಕೋಲ್ಕತ್ತಾದ ಅಂಗಳದಲ್ಲೇ. ವಿದೇಶದಲ್ಲಿ ನೌಕರಿ ಮಾಡಿ, ಭಾರತಕ್ಕೆ ವಾಪಸಾದವರು. ಭ್ರಷ್ಟಾಚಾರದಿಂದ ರೋಸಿ ಹೋಗಿ, ತಂದೆಯ ಸಲಹೆಯಂತೆ, ಅದರ ವಿರುದ್ಧ ಹೋರಾಟಕ್ಕೆ ಇಳಿದವರು. ಅಪರಾಧ ರಾಜಕಾರಣದ ಬಗೆಗಿನ ವೋಹ್ರಾ ವರದಿಯ ಅನುಷ್ಠಾನಕ್ಕೆ ಆಗ್ರಹಿಸಿದವರು. 1993ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ವೋಹ್ರಾ (ಗೃಹ ಕಾರ್ಯದರ್ಶಿಯಾಗಿದ್ದ ಎನ್‌.ಎನ್‌. ವೋಹ್ರಾ) ವರದಿಯಲ್ಲಿ ಅಪರಾಧ ರಾಜಕಾರಣ (ಅಪರಾಧಿಗಳು, ರಾಜಕಾರಣಿಗಳು ಹಾಗೂ ಅಧಿಕಾರಶಾಹಿಯ ಅಪವಿತ್ರ ಮೈತ್ರಿ)ದ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳನ್ನು ಉಲ್ಲೇಖೀಸಲಾಗಿತ್ತು. ಇದು ದಿನೇಶ್‌ ತ್ರಿವೇದಿಯ ಪೂರ್ವ ಇತಿಹಾಸದ ಮೊದಲ ಭಾಗ.

1980 ರಲ್ಲಿ ಕಾಂಗ್ರೆಸ್‌ ಸೇರ್ಪಡೆ. 1990 ರಲ್ಲಿ ಜನತಾದಳಕ್ಕೆ ವಲಸೆ. 1998 ರಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಯತ್ತ ಪ್ರಯಾಣ. ಟಿಎಂಸಿ ಮೊದಲ ಪ್ರಧಾನ ಕಾರ್ಯದರ್ಶಿಯೂ ಆದರು. 1990-96 ರಲ್ಲಿ ಜನತಾದಳದಿಂದ ರಾಜ್ಯಸಭೆಗೆ ಗುಜರಾತ್‌ನಿಂದ ಆಯ್ಕೆ, 2002 ರಿಂದ 2008 ರವರೆಗೆ ಪಶ್ಚಿಮ ಬಂಗಾಲದಿಂದ ತೃಣಮೂಲ ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇವರು ಮುಖ್ಯವಾಹಿನಿಗೆ ಬಂದದ್ದು ಮನಮೋಹನ್‌ ಸಿಂಗ್‌ರ ಕೇಂದ್ರ ಸಚಿವ ಸಂಪುಟದಲ್ಲಿ (ಯುಪಿಎ ಸರಕಾರದ ಎರಡನೇ ಅವಧಿ, ತೃಣಮೂಲ ಕಾಂಗ್ರೆಸ್‌ ಯುಪಿಎ ಯ ಅಂಗಪಕ್ಷ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವರಾಗಿ (ಮೇ 2009-ಜುಲೈ 2011), ಬಳಿಕ ರೈಲ್ವೇ ಸಚಿವರಾದರು(ಜುಲೈ 2011-ಮಾರ್ಚ್‌ 2012) ತ್ರಿವೇದಿ. ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲೆಂದು ರೆÌಲ್ವೇ ದರವನ್ನು 2 ರಿಂದ 30 ಪೈಸೆಗಳಂತೆ (ಕಿ.ಮೀ. ಗೆ) ಏರಿಸುವುದಾಗಿ ರೈಲ್ವೇ ಬಜೆಟ್‌ನಲ್ಲಿ ಘೋಷಿಸಿದರು. ಇದನ್ನು ಸ್ವತಃ ಅವರ ಪಕ್ಷದ ಮಮತಾ ಬ್ಯಾನರ್ಜಿಯೇ ಒಪ್ಪಲಿಲ್ಲ. ನನ್ನೊಂದಿಗೆ ಚರ್ಚಿಸದೇ ಜಾರಿಗೆ ತರುತ್ತಿರುವ ಏಕಪಕ್ಷೀಯ ನಿರ್ಧಾರಕ್ಕೆ ಬಂದ ಅವರನ್ನು ತೆಗೆಯಿರಿ ಎಂದು ಪತ್ರ ಬರೆದರು ಮಮತಾ ಪ್ರಧಾನಿ ಮನಮೋಹನರಿಗೆ. ಮಹಾ ಹಠವಾದಿ ದಿನೇಶ್‌ ತಮ್ಮ ಲೆಕ್ಕವನ್ನು ಸರಿ ಇಟ್ಟುಕೊಳ್ಳಲು ಮರೆಯಲಿಲ್ಲ. “ಮಮತಾ ಹಾಗೂ ಪಕ್ಷದ ಸೂಚನೆ ಮೇರೆಗೆ ತ್ಯಜಿಸುತ್ತಿದ್ದೇನೆ’ ಎಂದು ಬಹಿರಂಗವಾಗಿ ಹೇಳಿಯೇ ಸಂಪುಟದಿಂದ ಹೊರ ನಡೆದರು. ಪೂರ್ವ ಇತಿಹಾಸದ ಕೊನೆಯ ಭಾಗ.

ಈಗ ವರ್ತಮಾನದ್ದು. ಈ ಚುನಾವಣೆಗೆ ಪೀಠಿಕೆಯಂತೆ ಹೊರಗಿನವರು ಮತ್ತು ಬಂಗಾಲಿಯರು ಎಂಬ ವಾದ ಆರಂಭವಾಗಿದ್ದು ಕಳೆದ ವರ್ಷ. ಎನ್‌ಆರ್‌ಸಿ ಬಗೆಗಿನ ಚರ್ಚೆಯೂ ವೇಗ ಪಡೆಯುತ್ತಿದ್ದ ಹೊತ್ತು ಅದು. ಈ ಹೊತ್ತಿನಲ್ಲಿ ಕಳೆದ ಸೆಪ್ಟಂಬರ್‌ ಸುಮಾರಿನಲ್ಲಿ ಚುನಾವಣ ತಂತ್ರವಾಗಿ ಹಿಂದಿ ಭಾಷಿಗರನ್ನು ಸೆಳೆಯಲು ಮಮತಾ, ತಮ್ಮ ಪಕ್ಷದ ಹಿಂದಿ ಘಟಕವನ್ನು ಪುನಾರಚಿಸಿ ಇದೇ ದಿನೇಶ್‌ ತ್ರಿವೇದಿಯವರನ್ನು ಅಧ್ಯಕ್ಷರನ್ನಾಗಿಸಿದರು. 2019 ರ ಲೋಕಸಭೆ ಚುನಾವಣೆಯಲ್ಲಿ ಹಿಂದಿ ಭಾಷಿಗರು ಬಿಜೆಪಿ ಕಡೆಗೆ ವಾಲಿದ್ದರಂತೆ.

Advertisement

ಇಂದು ಹೊರಗಿನವರನ್ನು ಸೆಳೆಯಲು ಕೋಟೆಗೆ ದೊಣ್ಣೆನಾಯಕನನ್ನಾಗಿ ನೇಮಿಸಿದ್ದ ತ್ರಿವೇದಿಯವರೇ ಮಮತಾ ಅವರು ಟೀಕಿಸುತ್ತಿರುವ ಹೊರಗಿನವರ(ಬಿಜೆಪಿ) ಮನೆಯ ಹಜಾರವನ್ನು ಸೇರಿಕೊಂಡಿದ್ದಾರೆ. ಇದೇ ಇಂದಿನ ಪ್ರಮುಖ ನಡೆ.

– ಅಶ್ವಘೋಷ

Advertisement

Udayavani is now on Telegram. Click here to join our channel and stay updated with the latest news.

Next