ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ‘ಅ*ತ್ಯಾಚಾರ ಎಸಗಿದ ಅಪರಾಧಿಗಳಿಗೆ ಅನುಕರಣೀಯ ಶಿಕ್ಷೆಯೊಂದಿಗೆ ಕಠಿನ ಕಾನೂನನ್ನು ಜಾರಿಗೋಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಮುಖ್ಯ ಸಲಹೆಗಾರ ಅಲಪನ್ ಬಂಡೋಪಾಧ್ಯಾಯ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಓದಿದ್ದಾರೆ.
ಕೋಲ್ಕತಾದ ಸರಕಾರಿ ಸ್ವಾಮ್ಯದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅ*ತ್ಯಾಚಾರ ಮತ್ತು ಹ*ತ್ಯೆಯ ಕುರಿತು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ವೇಳೆ ಈ ಪತ್ರ ಬರೆದಿದ್ದಾರೆ.
‘ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿದಿನ ಸುಮಾರು 90 ಅತ್ಯಾಚಾರ ಪ್ರಕರಣಗಳು ಸಂಭವಿಸುತ್ತವೆ ಹಲವು ಪ್ರಕರಣಗಳಲ್ಲಿ ಅತ್ಯಾಚಾರ ಸಂತ್ರಸ್ತರನ್ನು ಹತ್ಯೆ ಮಾಡಲಾಗಿದೆ’ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಈ ಪ್ರವೃತ್ತಿಯನ್ನು ನೋಡುವುದು ಭಯಾನಕವಾಗಿದೆ. ಇದು ಸಮಾಜದ ಮತ್ತು ರಾಷ್ಟ್ರದ ಆತ್ಮವಿಶ್ವಾಸ ಮತ್ತು ಆತ್ಮಸಾಕ್ಷಿಯನ್ನು ಅಲುಗಾಡಿಸುತ್ತಿದೆ. ಮಹಿಳೆಯರು ಸುರಕ್ಷಿತ ಎನ್ನುವ ಭಾವನೆಯನ್ನು ಹೊಂದಲು, ಈ ರೀತಿಯ ಕೃತ್ಯಗಳನ್ನು ಕೊನೆಗೊಳಿಸುವುದು ನಮ್ಮ ಬದ್ಧ ಕರ್ತವ್ಯವಾಗಿದೆ. ಇಂತಹ ಗಂಭೀರ ಸಮಸ್ಯೆಯನ್ನು ಈ ಘೋರ ಅಪರಾಧಗಳಲ್ಲಿ ಭಾಗಿಯಾದವರಿಗೆ ಅನುಕರಣೀಯ ಶಿಕ್ಷೆಯನ್ನು ಸೂಚಿಸುವ ಕಟ್ಟುನಿಟ್ಟಾದ ಕೇಂದ್ರ ಕಾನೂನಿನ ಮೂಲಕ ಸಮಗ್ರವಾಗಿ ಪರಿಹರಿಸಬೇಕಾಗಿದೆ”ಎಂದು ಪತ್ರದಲ್ಲಿ ಬರೆಯಲಾಗಿದೆ.