ದೇಶವನ್ನು ಒಡೆಯುವ ಹಾಗೂ ದೇಶದಲ್ಲಿ ಎರಡು ಪ್ರಧಾನಿಗಳು ಬೇಕು ಎಂದು ವಾದಿಸುವ ಶಕ್ತಿಗಳೊಂದಿಗೆ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ನಂಟು ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಲದ ಕೂಛ…ಬಿಹಾರದಲ್ಲಿ ಪ್ರಚಾರ ರ್ಯಾಲಿ ನಡೆಸಿದ ಅವರು, ಕೇಂದ್ರ ಸರಕಾರದ ಹಲವು ಯೋಜನೆಗಳಿಗೆ ಸ್ಪೀಡ್ ಬ್ರೇಕರ್ ದೀದಿ ಬ್ರೇಕ್ ಹಾಕಿದ್ದಾರೆ. ದೇಶದ ಇತರ ಭಾಗದ ಜನರಿಗೆ ಲಭ್ಯವಾಗುತ್ತಿರುವ ಲಾಭಗಳು ರಾಜ್ಯದ ಜನತೆಗೆ ತಲುಪಲು ಬಿಡುತ್ತಿಲ್ಲ ಎಂದಿದ್ದಾರೆ.
ಶಾರದಾ, ನಾರದ ಹಾಗೂ ರೋಸ್‌ವ್ಯಾಲಿ ಹಗರಣಗಳಿಂದಾಗಿ ರಾಜ್ಯದ ಹೆಸರನ್ನು ದೀದಿ ಹಾಳು ಮಾಡಿದ್ದಾರೆ. ಲೂಟಿ ಮಾಡಿದ ಪ್ರತಿ ಪೈಸೆಗೂ ಈ ಚೌಕಿದಾರ ಲೆಕ್ಕ ಕೇಳುತ್ತಾನೆ. ಮೋದಿ ಮೋದಿ ಎಂಬ ಕೂಗು ದೀದಿಯ ನಿದ್ದೆಗೆಡಿಸಿದೆ. ಚುನಾವಣಾ ಆಯೋಗದ ವಿರುದ್ಧ ಅವರು ತೋರಿಸುತ್ತಿರುವ ಸಿಟ್ಟೇ ಇದಕ್ಕೆ ಉದಾಹರಣೆ ಎಂದಿದ್ದಾರೆ. 7ನೇ ವೇತನ ಆಯೋಗ ಯಾಕೆ ಜಾರಿ ಮಾಡಿಲ್ಲ ಎಂದು ಜನರಿಗೆ ದೀದಿ ಸ್ಪಷ್ಟನೆ ನೀಡಿದ್ದಾರೆಯೇ? ಪರೀಕ್ಷೆ ಬರೆದರೂ ನೇಮಕ ಯಾಕೆ ಆಗುತ್ತಿಲ್ಲ ಎಂದು ನಿಮಗೆ ತಿಳಿಸಿದ್ದಾರೆಯೇ ಎಂದೂ ಮೋದಿ ಪ್ರಶ್ನಿಸಿದರು. ಜತೆಗೆ, ಸದ್ಯದಲ್ಲೇ ದೇಶದಲ್ಲಿ ಫೋನ್ ಕರೆಗಳು ಉಚಿತವಾಗಲಿವೆ. ಇಂಟರ್ನೆಟ್ ಶುಲ್ಕ ಜಗತ್ತಿನಲ್ಲೇ ಅತಿ ಅಗ್ಗದಲ್ಲಿ ದೊರೆಯಲಿದೆ ಎಂದಿದ್ದಾರೆ.
ಶಾರದಾ ಹಗರಣ ಕುರಿತ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, “ಶಾರದಾ ಹಗರಣದ ಆರೋಪಿ ಮುಕುಲ್ ರಾಯ್ ನಿಮ್ಮ ಜೊತೆಗೇ ಇದ್ದಾರಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್, ಪಾಕಿಸ್ಥಾನದ ಮೈತ್ರಿ: ಮಣಿಪುರದಲ್ಲೂ ರವಿವಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಯಾಕೆಂದರೆ ಇಬ್ಬರೂ ಕಲಂ 370 ರದ್ದತಿಗೆ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದ ಮರುದಿನವೇ ಪಾಕಿಸ್ಥಾನದಿಂದಲೂ ಈ ಬಗ್ಗೆ ಪ್ರತಿಕ್ರಿಯೆ ಬಂದಿದೆ. ಕಲಂ 370ರಲ್ಲಿ ಯಾವುದೇ ಸಾಂವಿಧಾನಿಕ ಬದಲಾವಣೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ವಿವರಿಸಿತ್ತು.
ಈ ಬಾರಿ ಆಡಳಿತ ಪರ ಅಲೆಯಿದೆ. ಪ್ರತಿಪಕ್ಷಗಳ ವಿರುದ್ಧವೇ ಜನರು ಸಿಟ್ಟಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ. ವಿಪಕ್ಷ ನಾಯಕರು ಈಶಾನ್ಯ ಭಾಗವನ್ನು ಉತ್ಪಾದನೆಯ ಕೇಂದ್ರವನ್ನಾಗಿಸುತ್ತೇನೆ ಎಂದಿ ದ್ದಾರೆ. ಇಷ್ಟು ವರ್ಷಗಳವರೆಗೆ ಅವರು ಯಾವ ಉತ್ಪಾದನೆಯ ಕೇಂದ್ರವನ್ನಾಗಿ ಸಿದ್ದರು ಎಂದು ಮೋದಿ ಪ್ರಶ್ನಿಸಿದ್ದಾರೆ.
ಅಧಿಕಾರದಿಂದ ದೂರವಿಡಲು ಪ್ರಯತ್ನ
ನನ್ನನ್ನು ಅಧಿಕಾರದಿಂದ ದೂರವಿಡಲು ವಿಪಕ್ಷಗಳು ಶತಪ್ರಯತ್ನ ನಡೆಸಿವೆ. ವಿಪಕ್ಷಗಳು ಇದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಬಹುದಾಗಿದೆ. ಎನ್‌ಡಿಎ ಸರಕಾರ ಒಂದೆಡೆ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿದ್ದರೆ ವಿಪಕ್ಷಗಳು ಪಾಕಿಸ್ಥಾನದ ರಾಗ ಹಾಡುತ್ತಿವೆ ಎಂದು ಮೋದಿ ತ್ರಿಪುರಾದ ಉದಯಪುರದಲ್ಲಿ ನಡೆದ ರ್ಯಾಲಿಯಲ್ಲಿ ಟೀಕಿಸಿದ್ದಾರೆ. ತ್ರಿಪುರಾದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಹೊಡೆದಾಡುತ್ತಿವೆ. ಆದರೆ ದಿಲ್ಲಿಯಲ್ಲಿ ಅವರು ಒಟ್ಟಾಗುತ್ತಾರೆ. ತೆರೆಮರೆಯಲ್ಲಿ ಯಾವುದೇ ನಾಟಕ ಇಲ್ಲದೇ ಇದ್ದರೆ, ಕಾಂಗ್ರೆಸ್‌ನ ನಾಮದಾರ್ ಯಾಕೆ ಕೇರಳದಲ್ಲಿ ಸ್ಪರ್ಧಿಸಲು ತೆರಳುತ್ತಿದ್ದರು ಎಂದು ಮೋದಿ ಪ್ರಶ್ನಿಸಿದ್ದಾರೆ.