ಬಂಕುರಾ, ಪಶ್ಚಿಮ ಬಂಗಾಲ : ‘ನನ್ನನ್ನು ದೇಶದ ಪ್ರಧಾನಿ ಎಂದು ಒಪ್ಪಿಕೊಳ್ಳಲು ತಾನು ಸಿದ್ಧಳಿಲ್ಲ ಎಂದಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ದೇಶದ ಸಂವಿಧಾನವನ್ನು ಅಮಮಾನಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿ ಚುನಾವಣಾ ರಾಲಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, “ಮೋದಿ ದೇಶದ ಪ್ರಧಾನಿ ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದು ದೀದೀ ಮಮತಾ ಬಹಿರಂಗವಾಗಿ ಹೇಳಿದ್ದಾರೆ; ಆದರೆ ಅದೇ ಮಮತಾ ಅವರು ಪಾಕ್ ಪ್ರಧಾನಿಯನ್ನು ಆ ದೇಶದ ಪ್ರಧಾನಿ ಎಂಬುದನ್ನು ಒಪ್ಪುತ್ತಾರೆ” ಎಂದು ಹೇಳಿದರು.
ಈ ಬಾರಿಯ ಲೋಕಸಭಾ ಚುನಾವಣೆಯನ್ನು ತಾನು ಸೋಲುವ ಭೀತಿಯಲ್ಲಿ ದೀದಿ ಈ ಹತಾಶೆಯ ಮಾತುಗಳನ್ನು ಆಡುತ್ತಿದ್ದಾರೆ ಮತ್ತು ಆ ಮೂಲಕ ಆಕೆ ಸಂವಿಧಾನವನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಕೆಲ ದಿನಗಳ ಹಿಂದೆ ಫೋನಿ ಚಂಡಮಾರುತದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಫೋನ್ ಕರೆ ಮಾಡಿದ್ದರು; ಆದರೆ ಅದಕ್ಕೆ ಆಕೆ ಉತ್ತರಿಸಿರಲಿಲ್ಲ.
ಚಂಡಮಾರುತದ ವೇಳೆ ಆಕೆ (ಮಮತಾ ಬ್ಯಾನರ್ಜಿ) ನನ್ನ ಫೋನ್ ಕರೆಗಳನ್ನು ಸ್ವೀಕರಿಸಲೇ ಇಲ್ಲ; ಕೇಂದ್ರ ಸರಕಾರ ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ಕುಳಿತು ಪರಿಸ್ಥಿತಿಯನ್ನು ಚರ್ಚಿಸಲು, ನೆರವಾಗಲು ಬಯಸಿತ್ತು; ಆದರೆ ದೀದಿ ಅದಕ್ಕೆ ಅವಕಾಶವನ್ನೇ ಮಾಡಿಕೊಡಲಿಲ್ಲ’ ಎಂದು ಪ್ರಧಾನಿ ಮೋದಿ ರಾಲಿಯಲ್ಲಿನ ತಮ್ಮ ಭಾಷಣದಲ್ಲಿ ಹೇಳಿದರು.