ಕೊಲ್ಕತ್ತಾ : ಮೋದಿ ಕೊಲ್ಕತ್ತಾ ಭೇಟಿ ಹಿನ್ನೆಲೆಯಲ್ಲಿಯೇ ಪ್ರತಿಭಟನೆ ಶುರು ಮಾಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೈಲ ಬೆಲೆ ಮತ್ತು ಎಲ್ ಪಿ ಜಿ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನು ಬಿಜೆಪಿ ಸರ್ಕಾರ ಹಾಗೂ ಮೋದಿ, ಅಮಿತ್ ಶಾ ಬಗ್ಗೆ ಕಿಡಿಕಾರಿರುವ ದೀದಿ, ಭಾರತಕ್ಕೆ ಗೊತ್ತಿದೆ ಯಾರು ಸಿಂಡಿಕೇಟ್ ಗಳು ಎಂದು, ಅವರು ಮೋದಿ ಮತ್ತು ಅಮಿತ್ ಶಾ ಎಂದಿದ್ದಾರೆ.
ನಾವು ಹೋರಾಟಕ್ಕೆ ಸಿದ್ದರಿದ್ದೇವೆ. ಅವರು ವೋಟುಗಳಿಗಾಗಿ ಹಣ ನೀಡಿದರೆ ಅದನ್ನು ತೆಗೆದುಕೊಂಡು ಟಿಎಂಸಿಗೆ ಮತ ಹಾಕಿ ಎಂದಿದ್ದಾರೆ. ಇನ್ನು ಬದಲಾವಣೆ ಕೇವಲ ದೆಹಲಿಯಲ್ಲಿ ಮಾತ್ರ ಆಗುತ್ತಿದೆ. ಮಹಿಳೆಯರಿಗೆ ಬಂಗಾಳದಲ್ಲಿ ರಕ್ಷಣೆ ಇಲ್ಲ ಎಂದು ಹೇಳಿರುವ ಮೋದಿ ಮಾತನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ, ಬಿಹಾರ ಮತ್ತು ಇತರೆ ರಾಜ್ಯಗಳನ್ನು ನೋಡಿ. ನಮ್ಮ ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ದೀದಿ ಮೋದಿಗೆ ತಿರುಗೇಟು ಕೊಟ್ಟಿದ್ದಾರೆ.
ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ಮಮತಾ ಬ್ಯಾನರ್ಜಿ ಸಿಲಿಗುರಿ ಪ್ರದೇಶದಲ್ಲಿ ಪಾದಯಾತ್ರ ನಡೆಸಿದ್ದಾರೆ. ಈ ವೇಳೆ ಮಹಿಳೆಯರು ಕೆಂಪು ಬಣ್ಣದ ಬಾವುಟವನ್ನು ಹಿಡಿದು ಮಮತಾ ಬ್ಯಾನರ್ಜಿಗೆ ಬೆಂಬಲ ಸೂಚಿಸಿದ್ದಾರೆ.