ಪಣಜಿ: ಮೂರು ತಿಂಗಳ ಹಿಂದಷ್ಟೇ ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದ ಗೋವಾದ ಮಾಜಿ ಶಾಸಕ ಲಾವೋ ಮಾಮ್ಲೇದಾರ್ ಶುಕ್ರವಾರ (ಡಿಸೆಂಬರ್ 24) ಮಮತಾ ಬ್ಯಾನರ್ಜಿಯ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇದೊಂದು ಕೋಮುವಾದಿ ಪಕ್ಷವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ ಮತಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಟರ್ಬನೇಟರ್ ಹರ್ಭಜನ್ ಸಿಂಗ್
ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಲೋಂಡಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಲಾವೋ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ರಾಜ್ಯದಲ್ಲಿ ಟಿಎಂಸಿ ಸೇರಿದ್ದ ಹಲವು ಸ್ಥಳೀಯ ಮುಖಂಡರಲ್ಲಿ ಇವರು ಕೂಡಾ ಮೊದಲಿಗರಾಗಿದ್ದರು.
2022ರ ಫೆಬ್ರುವರಿಯಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 40 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ಟಿಎಂಸಿ ನಿರ್ಧರಿಸಿತ್ತು.
ಸುದ್ದಿಗಾರರ ಜತೆ ಮಾತನಾಡಿದ ಮಾಮ್ಲೇದಾರ್, ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷದ ಸಾಧನೆಗೆ ಸಂಪೂರ್ಣವಾಗಿ ಪ್ರಭಾವಿತನಾಗಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆ. ಇದೊಂದು ಜಾತ್ಯತೀತ ಪಕ್ಷ ಎಂಬ ಬಗ್ಗೆ ಹೆಮ್ಮೆ ಇತ್ತು. ಆದರೆ ಕಳೆದ 15-20 ದಿನಗಳಲ್ಲಿ ನಾನು ಗಮನಿಸಿದಂತೆ ಇದೊಂದು ಬಿಜೆಪಿಗಿಂತ ಕೆಟ್ಟದಾದ ಪಕ್ಷವಾಗಿದೆ ಎಂದು ಆರೋಪಿಸಿದರು.
ಗೋವಾದಲ್ಲಿ ಟಿಎಂಸಿ ಹಿಂದೂ ಮತ್ತು ಕ್ರಿಶ್ಚಿಯನ್ ಮತಗಳನ್ನು ವಿಭಜಿಸಲು ಯತ್ನಿಸುತ್ತಿದೆ. ಚುನಾವಣಾ ಪೂರ್ವ ಮೈತ್ರಿಯಂತೆ, ಕ್ರಿಶ್ಚಿಯನ್ ಮತಗಳು ಟಿಎಂಸಿಗೆ ಹಾಗೂ ಹಿಂದೂಗಳ ಮತ ಎಂಜಿಪಿಗೆ ಎಂಬುದಾಗಿ ಲೆಕ್ಕಚಾರ ಹಾಕಿದೆ. ಇದೊಂದು ಕೋಮುವಾದಿ ಪಕ್ಷವಾಗಿದೆ ಎಂದು ಮಾಮ್ಲೇದಾರ್ ದೂರಿದರು.