ಪಣಜಿ: ಗೋವಾದಲ್ಲಿ ವಿಧಾಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ರಾಷ್ಟ್ರೀಯ ನಾಯಕರು ಗೋವಾಕ್ಕೆ ಆಗಮಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಕ್ಟೋಬರ್ 28 ರಂದು ಗೋವಾಕ್ಕೆ ಆಗಮಿಸಲಿದ್ದು, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಲುಯಿಜಿನ್ ಫಾಲೆರೊ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈಗಾಗಲೇ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಗೋವಾ ವಿಧಾನಸಭಾ ಚುನಾವಣೆ 2022 ರ ಜನವರಿ ಅಥವಾ ಫೆಬ್ರುವರಿಯಲ್ಲಿ ನಡೆಯಲಿದೆಯಾದರೂ ತೃಣಮೂಲ ಕಾಂಗ್ರೆಸ್ ಪಕ್ಷವು ಗೋವಾದಲ್ಲಿ ಕಳೆದ ಜೂನ್ ತಿಂಗಳಿಂದಲೇ ಪಕ್ಷ ಸಂಘಟನಾ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಮಮತಾ ಬ್ಯಾನರ್ಜಿ ರವರು ಪಕ್ಷದ ಪರ ಪ್ರಚಾರದ ಹಿನ್ನೆಲೆಯಲ್ಲಿ ಇದೇ ಮೊದಲ ಭಾರಿಗೆ ಗೋವಾಕ್ಕೆ ಆಗಮಿಸಲಿದ್ದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುವಂತಾಗಿದೆ.
ಲುಯಿಜಿನ್ ಫಾಲೆರೊ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ
ತೃಣಮೂಲ ಕಾಂಗ್ರೆಸ್ ಪಕ್ಷವು ಶುಕ್ರವಾರ ಲುಯಿಜಿನ್ ಫಾಲೆರೊ ರವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿದೆ. ಕಾಂಗ್ರೆಸ್ ಪಕ್ಷದಿಂದ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ಲುಯಿಜಿನ್ ಫಾಲೆರೊ ರವರಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದ ದೊಡ್ಡ ಜವಾಬ್ದಾರಿ ಲಭಿಸಿದಂತಾಗಿದೆ.
ತಮ್ಮನ್ನು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದಕ್ಕೆ ಲುಯಿಜಿನ್ ಫಾಲೆರೊ ರವರು ಅತ್ಯಂತ ಅಭಿಮಾನ ವ್ಯಕ್ತಪಡಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷವು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಬೆಂಬಲವಿಲ್ಲದೆಯೇ ಸ್ವತಂತ್ರವಾಗಿ ಸ್ಫರ್ಧಿಸುವುದಾಗಿ ಈ ಹಿಂದೆಯೇ ಹೇಳಿಕೆ ನೀಡಿದೆ.