ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಪಕ್ಷಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಸ್ವಂತ ಬಲದಿಂದಲೇ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಬುಧವಾರ ಘೋಷಿಸಿದ್ದಾರೆ.
ಚುನಾವಣಾ ಫಲಿತಾಂಶ ಬಂದ ನಂತರವಷ್ಟೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು. ಎರಡೂ ಪಕ್ಷಗಳು ಇಂಡಿಯಾದ ಮೈತ್ರಿಯ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.
ಕಳೆದ ಹಲವು ದಿನಗಳಿಂದ ಬಂಗಾಳದಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಮೈತ್ರಿ ಕುರಿತು ಜಟಾಪಟಿ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರಲ್ಲೂ ಎರಡು ಪಕ್ಷಗಳ ಮೈತ್ರಿ ಬಗ್ಗೆ ಒಮ್ಮತ ಮೂಡಿಲ್ಲ. ಇದೀಗ ಮಮತಾ ಅವರು ಕಾಂಗ್ರೆಸ್ ಗೂ, ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು ‘ನನಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ… ನಾವು ಏಕಾಂಗಿಯಾಗಿ ಹೋರಾಡುತ್ತೇವೆ, ಚುನಾವಣೆಯ ನಂತರ ಅಖಿಲ ಭಾರತ ಮಟ್ಟದಲ್ಲಿ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ತೀರ್ಮಾನಿಸುತ್ತೇವೆ’ ಎಂದು ಬಂಗಾಳ ಮುಖ್ಯಮಂತ್ರಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಅವರ ‘ಭಾರತ್ ಜೋಡೋ ನ್ಯಾಯ ಯಾತ್ರೆಯ ಕುರಿತು ಕಿಡಿಕಾರಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆ ನನ್ನ ರಾಜ್ಯಕ್ಕೆ ಬರುತ್ತಿರುವ ಕುರಿತು ಕಾಂಗ್ರೆಸ್ ಯಾವುದೇ ಮಾಹಿತಿಯನ್ನು ನೀಡಿಲ್ಲ, ಸೌಜನ್ಯಕ್ಕಾದರೂ ನನಗೆ ತಿಳಿಸುವ ಆಲೋಚನೆ ಅವರಿಗಿರಲಿಲ್ಲ…’ ಎಂದು ಮಮತಾ ಹೇಳಿದರು.
ನಾನು ಅವರಿಗೆ ನೀಡಿದ ಎಲ್ಲ ಪ್ರಸ್ತಾವನೆಗಳನ್ನೂ ಅವರು ತಿರಸ್ಕರಿಸಿದ್ದಾರೆ. ಹೀಗಾಗಿ ನಾವು ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಐಕ್ಯತಾ ರಂಗವನ್ನು ರಚಿಸುವ ವಿರೋಧ ಪಕ್ಷಗಳ ಪ್ರಯತ್ನಕ್ಕೆ ಮಮತಾ ಬ್ಯಾನರ್ಜಿ ನಿರ್ಧಾರದಿಂದ ತೀವ್ರ ಧಕ್ಕೆಯಾದಂತಾಗಿದೆ.
ಇದನ್ನೂ ಓದಿ: ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಗುಂಡು ಹಾರಿಸಿಕೊಂಡ ಅಸ್ಸಾಂ ರೈಫಲ್ಸ್ ಯೋಧ