ನವದೆಹಲಿ: ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಕರಾವಳಿ ಭಾಗಗಳಲ್ಲಿ ಭಾರೀ ಹಾನಿ ಉಂಟುಮಾಡಿರುವ ಫೋನಿ ಚಂಡಮಾರುತದ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಕುರಿತಾಗಿ ಚರ್ಚಿಸಲು ಪಶ್ವಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಲು ಪ್ರಧಾನ ಮಂತ್ರಿ ಕಛೇರಿ ಮಾಡಿರುವ ಪ್ರಯತ್ನ ವಿಫಲವಾಗಿದೆ ಎಂದು ಪಿ.ಎಂ.ಒ. ಕಛೇರಿಯ ಮೂಲಗಳಿಂದ ತಿಳಿದುಬಂದಿದೆ.
ಫೋನಿ ಚಂಡಮಾರುತ ಅಪ್ಪಳಿಸುವ ಮುನ್ನ ಹಾಗೂ ಅಪ್ಪಳಿಸಿದ ಬಳಿಕದ ಸ್ಥಿತಿಗತಿಗಳನ್ನು ಪರಾಮರ್ಶಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಡಿಸ್ಸಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು.
ಆದರೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಲು ಎರಡು ಬಾರಿ ಪ್ರಯತ್ನಿಸಲಾಯಿತಾದರು ಪ್ರಧಾನ ಮಂತ್ರಿ ಕಛೇರಿಯ ಈ ಎರಡೂ ಪ್ರಯತ್ನಗಳು ವಿಫಲವಾಗಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ಅವರು ನವೀನ್ ಪಟ್ನಾಯಕ್ ಮತ್ತು ಪಶ್ಚಿಮ ಬಂಗಾಲದ ರಾಜ್ಯಪಾಲರೊಂದಿಗೆ ಮಾತ್ರವೇ ಮಾತನಾಡಿದ್ದು ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿ ಚಂಡಮಾರುತ ಪರಿಣಾಮದ ಕುರಿತು ವಿವರ ಪಡೆದಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.
Related Articles
ಮಾಧ್ಯಮಗಳ ಈ ವರದಿಗೆ ಪ್ರಧಾನ ಮಂತ್ರಿ ಸಚಿವಾಲಯವು ಇಂದು ಸ್ಪಷ್ಟನೆಯನ್ನು ನೀಡಿದೆ ಮತ್ತು ಪಶ್ಚಿಮ ಬಂಗಾಲ ಮುಖ್ಯಮಂತ್ರಿಯವರನ್ನು ಸಂಪರ್ಕಿಸಲು ಪ್ರಧಾನ ಮಂತ್ರಿ ಕಛೇರಿಯು ಮಾಡಿದ ಎರಡೂ ಪ್ರಯತ್ನಗಳು ವಿಫಲವಾಯಿತು ಮಾತ್ರವಲ್ಲದೇ ಮಮತಾ ಅವರು ದೂರವಾಣಿ ಸಂಪರ್ಕಕ್ಕೇ ಸಿಗಲಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಪ್ರಧಾನ ಮಂತ್ರಿ ಅವರು ಪಶ್ಚಿಮ ಬಂಗಾಲದ ರಾಜ್ಯಪಾಲರಿಗೆ ಮಾತ್ರವೇ ಕರೆ ಮಾಡಿ ಮಾತನಾಡಿದ್ದಾರೆ ಮತ್ತು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿಲ್ಲ ಎಂಬುದು ತೃಣಮೂಲ ಕಾಂಗ್ರೆಸ್ ಪಕ್ಷದ ಆರೋಪವಾಗಿತ್ತು.