ಕೋಲ್ಕತಾ: ಪ್ರತಿಯೊಬ್ಬರನ್ನು ಕಳ್ಳರು ಎಂಬಂತೆ ಬಿಂಬಿಸುತ್ತಿರುವ ಭಾರತೀಯ ಜನತಾ ಪಕ್ಷದ ವಿರುದ್ಧ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ (ಆಗಸ್ಟ್ 29) ವಾಗ್ದಾಳಿ ನಡೆಸಿದ್ದು, ಒಂದು ವೇಳೆ ರಾಜಕೀಯದಲ್ಲಿ ಇಲ್ಲದಿರುತ್ತಿದ್ದರೆ, ಬಿಜೆಪಿಯವರ ನಾಲಿಗೆ ಸೀಳಿ ಬಿಡುತ್ತಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಗಣಪನ ಮೂರ್ತಿ ಉಚಿತ ವಿತರಣೆ: ಕೇಳ್ಳೋರಿಲ್ಲ ತಯಾರಕರ ಬವಣೆ
ತೃಣಮೂಲ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಸರಿ ಪಕ್ಷವನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳನ್ನು ಮತ್ತು ಚುನಾಯಿತ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲು ಕೇಂದ್ರ ತನಿಖಾ ಸಂಸ್ಥೆ ಮತ್ತು ಬಿಜೆಪಿಯ ಅಕ್ರಮ ಹಣವನ್ನು ಬಳಸಲಾಗುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸುವುದಾಗಿ ಮಮತಾ ಬ್ಯಾನರ್ಜಿ ಪಣತೊಟ್ಟಿರುವುದಾಗಿ ವರದಿ ವಿವರಿಸಿದೆ. ಟಿಎಂಸಿಯಲ್ಲಿರುವ ಎಲ್ಲಾ ಮುಖಂಡರು ಕಳ್ಳರು ಎಂಬಂತೆ ಅಪಪ್ರಚಾರ ಮಾಡುತ್ತಿದ್ದು, ಬಿಜೆಪಿ ಮುಖಂಡರು ಮಾತ್ರ ಶುದ್ಧಹಸ್ತರು ಎಂದು ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ರಾಜಕೀಯದಲ್ಲಿ ಇಲ್ಲದಿರುತ್ತಿದ್ದರೆ, ಅವರ ನಾಲಿಗೆ ಸೀಳಿ ಬಿಡುತ್ತಿದ್ದೆ ಎಂದು ಕಿಡಿಕಾರಿರುವುದಾಗಿ ಪಿಟಿಐ ವರದಿ ಮಾಡಿದೆ.