Advertisement

Malpe: ಸಿದ್ಧಗೊಳ್ಳುತ್ತಿವೆ ಸಾಂಪ್ರದಾಯಿಕ ಗೂಡುದೀಪಗಳು

05:09 PM Oct 27, 2024 | Team Udayavani |

ಮಲ್ಪೆ: ಬೆಳಕಿನ ಹಬ್ಬ ದೀಪಾವಳಿಯ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಬಣ್ಣ ಬಣ್ಣದ ಗೂಡು ದೀಪಗಳು. ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಸಿಂಥೆಟಿಕ್‌ ಬಟ್ಟೆಯಿಂದ ತಯಾರಿಸಿದ ಚೀನ ಮೇಡ್‌ ಗೂಡು ದೀಪಗಳ ಪ್ರಾಬಲ್ಯವಿದ್ದರೂ ಅದನ್ನು ಮುರಿದು ಈಗ ಮತ್ತೆ ಸಾಂಪ್ರದಾಯಿಕ ಗೂಡುದೀಪಗಳು ಜನಾಕರ್ಷಣೆ ಸೃಷ್ಟಿಸಿಕೊಂಡಿವೆ. ಅದರಲ್ಲೂ ಸ್ಥಳೀಯವಾಗಿಯೇ ಇದರ ನಿರ್ಮಾಣ ಮತ್ತು ಮಾರಾಟ ನಡೆಯು ತ್ತಿರುವುದು ಗಮನ ಸೆಳೆದಿದೆ.

Advertisement

ಉಡುಪಿ ಮತ್ತು ಮಲ್ಪೆಯ ಕೆಲವು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೂಡುದೀಪಗಳನ್ನು ನಿರ್ಮಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಸ್ಥಳೀಯವಾಗಿ ನಿರ್ಮಿಸಿದ ಗೂಡುದೀಪಗಳು ಹೆಚ್ಚಿನ ಅಂಗಡಿಗಳಲ್ಲಿ ಕಾಣಸಿಗುತ್ತವೆ.

ಮೂಡುಬೆಟ್ಟು ಮಧ್ವನಗರದ ಸಮೀಪದ ಮಮತಾ ಆಚಾರ್ಯ ಅವರ ನೇತೃತ್ವದಲ್ಲಿ ಯುವತಿಯರ ತಂಡ ಉಡುಪಿ ಬಳಿ ಒಳಕಾಡುವಿನ ಅಂಗಡಿ ಒಂದರಲ್ಲಿ ಕಳೆದ 6-7 ತಿಂಗಳಿನಿಂದ ಗೂಡುದೀಪ ತಯಾರಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಲ್ಪಟ್ಟ ಗೂಡುದೀಪಗಳಿಗೆ 250ರಿಂದ 1,000 ರೂ. ಬೆಲೆ ನಿಗದಿಪಡಿಸಲಾಗಿದೆ. ಒಂದೊಂದು ಗೂಡುದೀಪಗಳು ವಿಭಿನ್ನ ವಿನ್ಯಾಸದಿಂದ ಮನ ಸೆಳೆಯುತ್ತದೆ.

ಬಿದಿರಿನ ಗೂಡುದೀಪದ ತಯಾರಿ ಹೀಗೆ…
ಸೀಮೆ ಕೋಲುಗಳನ್ನು ಸಪೂರ ಕಡ್ಡಿಗಳನ್ನಾಗಿಸಬೇಕು. ಇಂತಹ 36 ಕಡ್ಡಿಗಳು ಬೇಕು. ಇದರಲ್ಲಿ 4 ಕಡ್ಡಿಗಳು ಇತರ ಕಡ್ಡಿಗಿಂತ ಉದ್ದ ಇರಬೇಕು. ಇದನ್ನು ಆಧಾರ ಕಡ್ಡಿ ಎಂದು ಕರೆಯಲಾಗುತ್ತದೆ. ಮೇಣದ ದೀಪವನ್ನು ಇಡುವುದಾದರೆ ಈ 32 ಕಡ್ಡಿಗಳಲ್ಲದೆ 2 ಹೆಚ್ಚುವರಿ ಕಡ್ಡಿ ಬೇಕಾಗುತ್ತದೆ. ಕಡ್ಡಿಗಳನ್ನು ಸಿದ್ಧಮಾಡಿಕೊಂಡ ಬಳಿಕ ಆಧಾರ ಕಡ್ಡಿಗಳನ್ನು ಹೊರತುಪಡಿಸಿ ಇತರ ಕಡ್ಡಿಗಳನ್ನು ಚೌಕಾಕಾರವಾಗಿ ನೂಲಿನಿಂದ ಕಟ್ಟಿಕೊಳ್ಳಬೇಕು, 32 ಕಡ್ಡಿಗಳಿಂದ 8 ಚೌಕಗಳನ್ನು ಒಂದೇ ರೀತಿಯಲ್ಲಿ ರಚಿಸಿಕೊಳ್ಳಬೇಕು. ನಂತರ ಆಧಾರ ಕಡ್ಡಿಯಲ್ಲಿ ಆಳತೆ ಮಾಡಿ ಗುರುತು ಮಾಡಿಕೊಳ್ಳಬೇಕು. ಕಡ್ಡಿಯ ಒಂದೊಂದು ಬದಿ ಸಮಾನ ಅಂತರದ ಮೂರು ಗುರುತು ಮಾಡಿ, ಒಳತುದಿಯಲ್ಲಿ ಬರುವ ಗುರುತಿಗೆ ಚೌಕಾಕಾರದ ಪಟ್ಟಿಯನ್ನು ತುದಿಯಿಂದ ತುದಿಗೆ ಕಟ್ಟಬೇಕು, ನಾಲ್ಕು ಕಡ್ಡಿಗಳಿಗೆ ನೂಲಿನಿಂದ ಕಟ್ಟಿದ ಬಳಿಕ ಆಧಾರ ಕಡ್ಡಿಯಲ್ಲಿ ಅದನ್ನು ನಿಲ್ಲಿಸಿ ಅದರ ಉಳಿದ ತುದಿಯನ್ನು ಒಂದಕ್ಕೊಂದು ಜೋಡಿಸಬೇಕು. ಆ ಬಳಿಕ ಬಣ್ಣದ ಪೇಪರ್‌ ಅಥವಾ ಗ್ಲಾಸ್‌ ಪೇಪರ್‌ ಅನ್ನು ಗಮ್‌ನ ಸಹಾಯದಿಂದ ಅಂಟಿಸಲಾಗುತ್ತದೆ. ಬಾಲ, ಹೂವಿಗೆ ವಿವಿಧ ರೀತಿಯ ಬಣ್ಣದ ಪೇಪರ್‌ ಬಳಸಲಾಗುತ್ತದೆ.

-ನಟರಾಜ್‌ ಮಲ್ಪೆ

Advertisement
Advertisement

Udayavani is now on Telegram. Click here to join our channel and stay updated with the latest news.

Next