ಮಲ್ಪೆ: ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಸಮುದ್ರದಲೆಗಳು ಅಲ್ಲಲ್ಲಿ ನೀಲಿ-ಹಸಿರು ಬಣ್ಣದಿಂದ ಹೊಳೆಯುತ್ತಿರುವುದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿಯಾಗಿದೆ. ಇದು ಹಿಂದಿನಿಂದಲೂ ನಡೆಯುವ ಪ್ರಕೃತಿ ಸಹಜ ಕ್ರಿಯೆ ಎನ್ನುತ್ತಾರೆ ಮೀನುಗಾರರು.
ಮಳೆಗಾಲದಲ್ಲಿ ನದಿಯ ನೀರು ಹೆಚ್ಚಿನ ಪ್ರಮಾಣದಲ್ಲಿ ಸಮುದ್ರ ಸೇರುತ್ತದೆ. ನದಿ ನೀರಿನಲ್ಲಿ ಹೇರಳ ಖನಿಜಾಂಶ ಇರುತ್ತದೆ. ಬಿಸಿಲು ಬಿದ್ದಾಗ ಸಮುದ್ರದಲ್ಲಿರುವ ಸೂಕ್ಷ್ಮ ಜೀವಿಗಳು ಖನಿಜಾಂಶ ಬಳಸಿ ಪಾಚಿ ಉತ್ಪಾದಿಸುತ್ತವೆ. ಕಡಲಲ್ಲಿ ಪಾಚಿಯ ಪ್ರಮಾಣ ಹೆಚ್ಚಳವಾದಾಗ ಅಲೆಗಳ ಮೂಲಕ ದಡಕ್ಕೆ ಬರುವ ಹಿನ್ನೆಲೆಯಲ್ಲಿ ಕಡಲು ಹಸುರು ಅಥವಾ ನೀಲಿಯಾಗಿ ಕಾಣಿಸಿಕೊಳ್ಳುತ್ತದೆ. ಇದು ಪ್ರತೀ ವರ್ಷ ಮಳೆಗಾಲದ ಅಂತ್ಯದಲ್ಲಿ ಕಾಣಿಸಿಕೊಳ್ಳುವ ಸಹಜ ಪ್ರಕ್ರಿಯೆ. ರಾತ್ರಿಯ ವೇಳೆ ಅಲೆಗಳ ಜತೆಯಲ್ಲಿ ಬರುವ ಪಾಚಿಯ ಮೇಲೆ ಚಂದ್ರನ ಬೆಳಕು ಬಿದ್ದಾಗ ಮಿಂಚುಹುಳದ ಬೆಳಕಿನಂತೆ ಹೊಳೆಯುತ್ತದೆ ಎಂಬುದು ಕಡಲತೀರ ನಿವಾಸಿಗಳ ಅಭಿಪ್ರಾಯ.
ಇದು ಸಮುದ್ರದ ನೀರಿನ ಮಟ್ಟ ಇಳಿಮುಖವಾದಾಗ, ಅಲೆಗಳ ಅಬ್ಬರ ಕಡಿಮೆ ಇದ್ದ ಸಂದರ್ಭದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪಾಚಿ ಕೂದಲಿನಂತೆ ಎಳೆ ಎಳೆಯಾಗಿದ್ದು, ನದಿ ನೀರಿನಲ್ಲೂ ಕಾಣಿಸಿಕೊಳ್ಳುತ್ತದೆ. ಮಳೆ ಕಡಿಮೆಯಾಗಿ ಬಿಸಿಲಿನ ತಾಪ ಹೆಚ್ಚಾದಾಗ ಹೆಚ್ಚಾಗಿರುತ್ತದೆ. ವಾಸನೆಯಿಂದ ಕೂಡಿರುವ ಇದ ರಿಂದ ಯಾವುದೇ ಜಲಚರಗಳಿಗೆ ತೊಂದರೆಯಿಲ್ಲ ಎನ್ನುತ್ತಾರೆ ಮೀನುಗಾರರಾದ ದಿನೇಶ್ ಪಡುಕರೆ ಮತ್ತು ಸುಧಾಕರ ಅಮೀನ್.
ಸಮುದ್ರದಲ್ಲಿನ ರಾಸಾಯನಿಕ ಕ್ರಿಯೆಯಿಂದ ಇಂತಹ ವಿದ್ಯಮಾನ ನಡೆಯುತ್ತದೆ. ಪಾಚಿ ಹೇರಳವಾಗಿ ಕಾಣಿಸಿಕೊಂಡ ಜಾಗದಲ್ಲಿ ಆಕ್ಸಿಜನ್ ಕಡಿಮೆಯಾಗಿ ಕೆಲವು ಬಾರಿ ಮೀನುಗಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
ಡಾ| ಪ್ರತಿಭಾ ರೋಹಿತ್, ಮೀನುಗಾರಿಕೆ ವಿಜ್ಞಾನಿ