Advertisement

ಮಲ್ಪೆ ಸೀವಾಕ್‌ವೇ: ಧರೆಗುರುಳಿವೆ ಆಲಂಕಾರಿಕ ದಾರಿದೀಪ ಕಂಬಗಳು

02:43 PM Dec 29, 2023 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕಾ ಬಂದರಿನ ಪಶ್ಚಿಮ ದಿಕ್ಕಿನ (ಸೈಂಟ್‌ಮೇರಿ ದ್ವೀಪಯಾನದ ಸ್ಟಾರ್ಟಿಂಗ್‌ ಪಾಯಿಂಟ್‌) ಬ್ರೇಕ್‌ವಾಟರ್‌ ಮೇಲೆ ನಿರ್ಮಾಣಗೊಂಡ ಕರ್ನಾಟಕದ ಮೊಟ್ಟ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸೀ ವಾಕ್‌ವೇ ಸಮರ್ಪಕವಾದ ನಿರ್ವಹಣೆ ಇಲ್ಲದೆ ಸೊರಗುತ್ತಿವೆ.

Advertisement

ರಾತ್ರಿ ವೇಳೆಯಲ್ಲಿ ಇಲ್ಲಿ ನಡೆದಾಡಲು ಹಾದಿ ಉದ್ದಕ್ಕೂ ಸುಮಾರು 29 ಆಲಂಕಾರಿಕಾ ದೀಪಗಳನ್ನು ಅಳವಡಿಸಲಾಗಿತ್ತು.
ಇದೀಗ ಎರಡು ಮೂರು ಕಂಬಗಳಲ್ಲಿ ದೀಪ ಬೆಳಗುವುದು ಬಿಟ್ಟರೆ ಉಳಿದೆಲ್ಲವುಗಳಲ್ಲಿ ದೀಪವೇ ಉರಿಯುತ್ತಿಲ್ಲ. ಸುಮಾರು 7-8 ಕಂಬಗಳು ಈಗಾಗಲೇ ತುಕ್ಕು ಹಿಡಿದು ಧರೆಗುರುಳಿವೆ. ಇದೀಗ ಪ್ರತಿನಿತ್ಯ ಪ್ರವಾಸಿಗರ ದಂಡೇ ಇಲ್ಲಿ ಸೇರುತ್ತದೆ.

ಕತ್ತಲಾದರೆ ಇಲ್ಲಿ ನಡೆದಾಡಲು ಭಯ ಪಡುವ ಪರಿಸ್ಥಿತಿ ಇದೆ. ಮಾತ್ರವಲ್ಲದೆ ಸುರಕ್ಷೆಯ ಪ್ರಶ್ನೆಯೂ ಎದುರಾಗಿದೆ. ಇಲ್ಲಿ ನೆಲಕ್ಕೆ ಅಳವಡಿಸಲಾದ ಇಂಟರ್‌ ಲಾಕ್‌ ಕೆಲವೊಂದು ಕಡೆ ಕಿತ್ತು ಹೋಗಿದ್ದರಿಂದ ಬಹುತೇಕ ಜನರು ಕತ್ತಲಲ್ಲಿ ಎಡವಿ ಬಿದ್ದು ಗಾಯಗೊಂಡಿದ್ದಾರೆ.

ಉದ್ಯಾನವನದಲ್ಲೂ ಕತ್ತಲೆ
ಇತ್ತ ಸೀವಾಕ್‌ ಬಳಿಯ ಉದ್ಯಾನವನದಲ್ಲೂ ಕಳೆದ ಕೆಲವು ತಿಂಗಳಿನಿಂದ ದೀಪಗಳು ಉರಿಯುತ್ತಿಲ್ಲ. ಇದರಿಂದ ಬಂದ ಪ್ರವಾಸಿಗರು ಕತ್ತಲ್ಲಲ್ಲಿಯೇ ತಿರುಗಾಡಬೇಕಾದ ಪ್ರಸಂಗ ಎದುರಾಗಿದೆ.

ಪ್ರವಾಸಿಗರ ನೆಚ್ಚಿನ ತಾಣ
ಜನ ಸಾಮಾನ್ಯರು ನಡೆದಾಡಲು ಭಯಪಡುತ್ತಿದ್ದ ತಾಣವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದ್ದರಿಂದ ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು ವಾಯು ವಿಹಾರದೊಂದಿಗೆ ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸುವಂತಾಗಿದೆ. ಸುಮಾರು 480 ಮೀ. ಉದ್ದ, 8.5 ಅಡಿ ಅಗಲದಲ್ಲಿ ಸಮುದ್ರಕ್ಕೆ ವಿಸ್ತರಿಸಿರುವ ಈ ವಾಕ್‌ವೇ ಯನ್ನು ಬ್ರೇಕ್‌ವಾಟರ್‌ ಮೇಲೆ ಪ್ರವಾಸೋದ್ಯಮ ಇಲಾಖೆ ನಿರ್ಮಿತಿ ಕೇಂದ್ರ ನೇತೃತ್ವದಲ್ಲಿ 53.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸೀವಾಕ್‌ ಆರಂಭಗೊಂಡ ದಿನದಿಂದಲೂ ನೋಡಲು ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿತು ಸೈಂಟ್‌ಮೇರೀಸ್‌ಗೆಂದು ಬಂದವರು ಈಗ
ಸೀವಾಕ್‌ ನೋಡಿ ಹೋಗುತ್ತಾರೆ.

Advertisement

ಹೊಸ ಕಂಬಗಳ ಅಳವಡಿಕೆ
ಸೀವಾಕ್‌ನಲ್ಲಿ ಆಲಂಕಾರಿಕ ದೀಪದ ಕಂಬಗಳು ತುಕ್ಕು ಹಿಡಿದು ಬಿದ್ದಿರುವ ಬಗ್ಗೆ ದೂರು ಬಂದಿದೆ. ಸಂಬಂಧಪಟ್ಟ ಎಂಜಿನಿಯರ್‌ ಈಗಾಗಲೇ ಸ್ಥಳಕ್ಕೆ ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ. ಸೀವಾಕ್‌ನಲ್ಲಿ ಹಾಳಾಗಿರುವ ಎಲ್ಲ ಕಂಬವನ್ನು ಬದಲಾಯಿಸಿ ಹೊಸ ಕಂಬವನ್ನು ಅಳವಡಿಸಲಾಗುವುದು. ಪ್ರವಾಸಿಗರ ಹಿತ ದೃಷ್ಟಿಯಿಂದ ಆತೀ ಶೀಘ್ರದಲ್ಲಿ ಈ
ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು.
ರಾಯಪ್ಪ, ಕಾರ್ಯದರ್ಶಿ, ಮಲ್ಪೆ ಅಭಿವೃದ್ಧಿ
ಸಮಿತಿ, ಪೌರಾಯುಕ್ತರು ಉಡುಪಿ ನಗರಸಭೆ

*ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next