ಮಲ್ಪೆ: ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ನಗರ ಮಲ್ಪೆಯಲ್ಲಿ ಸಾರ್ವಜನಿಕ ಶೌಚಾಲಯದ ಸಮಸ್ಯೆ ಕಳೆದ ಹಲವಾರು ವರ್ಷದಿಂದ ಕಾಡುತ್ತಿದೆ.
ನಗರ ಪ್ರದೇಶದಲ್ಲಿನ ನಾಗರಿಕರ ಸೌಲಭ್ಯದ ದೃಷ್ಟಿಯಿಂದ ನಗರದಲ್ಲಿ ಲಭ್ಯವಿರಲೇ ಬೇಕಾದ ಪ್ರಾಥಮಿಕ ಅಗತ್ಯತೆಗಳಲ್ಲಿ ಶೌಚಾಲಯ ಪ್ರಮುಖ ವಾದುದು. ಹೊರ ಊರುಗಳಿಂದ ಅಗಮಿಸುವ ಜನತೆ ಮಲ್ಪೆ ಬಸ್ ನಿಲ್ದಾಣದಲ್ಲಿ ಶೌಚಗೃಹ ಹುಡುಕುವುದರಲ್ಲೆ ಸುಸ್ತಾಗುತ್ತಾರೆ. ಅನಿವಾರ್ಯವಾಗಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಇದೆ.
17 ವರ್ಷಗಳ ಹಿಂದೆ ಬಸ್ ನಿಲ್ದಾಣದ ಬಳಿ ಸ್ಥಳೀಯ ಸಂಸ್ಥೆಯೊಂದರ ನೆರವಿನಿಂದ ಚಿಕ್ಕದಾದ ಒಂದು ಶೌಚಾಲಯ ನಿರ್ಮಾಣವಾಗಿತ್ತು. ಕ್ರಮೇಣ ಅಲ್ಲಿನ ಕಟ್ಟಡವೂ ತೆರವಾಗಿ ಶೌಚಾಲಯವೂ ಇಲ್ಲದಂತಾಯಿತು. ಮಲ್ಪೆ ವ್ಯವಹಾರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಂಡರೂ, ನಗರದ ಬೆಳವಣಿಗೆಯ ಜತೆಗೆ ಕೆಲವೊಂದು ಆವಶ್ಯಕತೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಮಲ್ಪೆ ಮೀನುಗಾರಿಕಾ ಬಂದರಿನ ಒಳಗೆ ಬಿಟ್ಟರೆ ನಗರದ ಸುತ್ತಮುತ್ತ ಎಲ್ಲೂ ಶೌಚಾಲಯದ ವ್ಯವಸ್ಥೆ ಇಲ್ಲ. ಜನರು ಕಣ್ಣು ತಪ್ಪಿಸಿ ಹತ್ತಿರ ಕಟ್ಟಡದ ಮರೆಯಲ್ಲಿಯೋ ಅಥವಾ ಚರಂಡಿ ಬದಿಯೋ ಮೂತ್ರ ವಿಸರ್ಜಿಸಿ ನಿರಾಳರಾದರೆ, ಮಹಿಳೆಯರ ಸಂಕಷ್ಟವನ್ನಂತೂ ಹೇಳತೀರದು.
ಖಾಲಿ ಜಾಗ ಇಲ್ಲ
ಮಲ್ಪೆ ಮುಖ್ಯ ಬಸ್ ನಿಲ್ದಾಣದ ಸಮೀಪ ಎಲ್ಲೂ ಸರಕಾರಿ ಖಾಲಿ ಜಾಗ ಇಲ್ಲ. ಜಾಗ ಇದ್ದರೆ ಮಾಡುವ ಯೋಜನೆ ಇದೆ. ಮಲ್ಪೆ ಬೀಚ್‌ನಲ್ಲಿ ನಗರಸಭೆಯ ವತಿಯಿಂದ ಈಗಾಗಲೇ ಶೌಚಾಲಯವನ್ನು ಮಾಡಲಾಗಿದೆ.
-ಉದಯ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರಸಭೆ
ಪರದಾಡುವಂತಾಗಿದೆ
ಶೌಚಗೃಹ ಇಲ್ಲದೆ ಇರುವುದರಿಂದ ಪರದಾಡುವಂತಾಗಿದೆ. ಸ್ಥಳೀಯಾಡಳಿತ ಜನರ ಸಮಸ್ಯೆಯನ್ನು ಅರಿತು ಬಸ್ ನಿಲ್ದಾಣ ಅಥವಾ ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಬೇಕಾಗಿದೆ
. -ದಿವ್ಯಾ, ಹನುಮಾನ್‌ನಗರ, ಸ್ಥಳೀಯ ಮಹಿಳೆ