Advertisement

ಪಿಸಿ ಪತ್ನಿಗೆ ಚುಡಾವಣೆ ಮತ್ತು ಹಲ್ಲೆ ಎರಡೂ ತನಿಖೆಯಾಗಲಿ: ಪ್ರಮೋದ್‌

12:39 PM Apr 11, 2017 | Team Udayavani |

ಉಡುಪಿ: ಪೊಲೀಸ್‌ ಕಾನ್ಸ್‌ಟೆಬಲ್‌ ಹಲ್ಲೆ ನಡೆಸಿದ ಪ್ರಕರಣ ಮತ್ತು ಕಾನ್ಸ್‌ಟೆಬಲ್‌ ಪತ್ನಿ ಮೇಲೆ ಚುಡಾಯಿಸಿದ ಪ್ರಕರಣ ಎರಡೂ ತನಿಖೆಯಾಗಲಿ. ಪಿಸಿ ಜತೆ ಬೇರೆಯವರು ಸೇರಿ ಹೊಡೆದಿದ್ದರೆ ಅದೂ ತನಿಖೆಯಾಗಲಿ. ಎಲ್ಲವೂ ಕಾನೂನು ಪ್ರಕಾರ ನಡೆಯಲಿ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

Advertisement

ಕುಮಾರ್‌ ನನ್ನ ಕಂಪೆನಿಯಲ್ಲಿ ದುಡಿಯುವ ಡ್ರೈವರ್‌. ಆತ ಕಾಮುಕನೋ? ಬೀದಿ ಕಾಮುಕನೋ? ತನಿಖೆ ನಡೆಸಲಿ. ಪತ್ರಕರ್ತರೂ ಸೇರಿದಂತೆ ಯಾರೂ ಕೂಡ ತನಿಖೆ ನಡೆಸಬಹುದು. ಹೌದಾದರೆ ಶಿಕ್ಷೆಯೂ ಆಗಲಿ. ಎಟಿಎಂನಲ್ಲಿ ಹಣ ತೆಗೆಯುವಾಗ ಆತ ಕಾನ್ಸ್‌ಟೆಬಲ್‌ ಪತ್ನಿಯನ್ನು ಚುಡಾಯಿಸಿದನೆಂಬ ಕಾರಣಕ್ಕೆ ಬೆನ್ನು ಮೂಳೆ ಮುರಿಯುವಂತೆ ಹೊಡೆಯಲು ಪೊಲೀಸರಿಗೆ ಅಧಿಕಾರವಿದೆಯೆ? ಈ ಪ್ರಕರಣದಲ್ಲಿ ಕುಮಾರ್‌ ಗಾಯಾಳುವಾಗಿ ಆಸ್ಪತ್ರೆಗೆ ಸೇರಿದ್ದರಿಂದ ಮೆಡಿಕೋ ಲೀಗಲ್‌ ಕೇಸ್‌ ದಾಖಲಾಗುತ್ತದೆ. ಇದು ಕಾನೂನಿನ ಭಾಗ. ನಾನು ಸೇರಿದರೂ ಆಗುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇಂತಹ ಪ್ರಕರಣದಲ್ಲಿ ಆರೋಪಿ ಅಮಾನತು ಆಗಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಕೇಸ್‌, ಕೌಂಟರ್‌ ಕೇಸ್‌ ವ್ಯವಸ್ಥೆಯಲ್ಲಿ ಸಹಜ. ಪೊಲೀಸರಿಗೆ ಯಾವ ಕೇಸ್‌ ಹಾಕಬೇಕು ಎನ್ನುವುದು ಗೊತ್ತಿರುವುದಿಲ್ಲವೆ? ನನ್ನ ಪತ್ನಿ ಬಳಿ ಪ್ರಕರಣ ದಾಖಲಿಸುವುದು ಬೇಡ ಎಂದು ಪಿಸಿ ಹೇಳಿದ್ದು ಹೌದು. ಆದರೆ ಆಸ್ಪತ್ರೆಗೆ ಸೇರಿದಾಗ ಪ್ರಕರಣ ಬೇಡ ಎಂದು ಹೇಳಲು ಆಗುವುದಿಲ್ಲ. ನಮ್ಮ ಕಂಪೆನಿಯಲ್ಲಿ ಗಾಯಾಳುವಾದವರನ್ನು ಆಸ್ಪತ್ರೆಗೆ ಸೇರಿಸಿಯೇ ಸೇರಿಸುತ್ತೇವೆ. ಇದರಲ್ಲಿ ಹೊಸತೇನಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನು ಕೈಗೆತ್ತಿಕೊಂಡರೆ ಸಹಿಸಬೇಕೆ?
ನಾನು ಎಸ್ಪಿಯವರ ಮೇಲೆ ಯಾವುದೇ ಒತ್ತಡ ತಂದಿಲ್ಲ. ತನಿಖೆ ಮಾಡಿ ಎಂದು ಹೇಳಿದ್ದೆ. ಬೆನ್ನು ಹುರಿ ಮುರಿದುಹೋಗುವ ವರೆಗೆ ಹೊಡೆದರೆ ಅದನ್ನು ಸಹಿಸಿಕೊಂಡು ಇರಬೇಕೆಂದು ನೀವು ಬಯಸುತ್ತೀರಾ ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು.

ನಾನು ಸಚಿವನಾದ ಬಳಿಕ ನನ್ನ ಪತ್ನಿ ಕಂಪೆನಿಯನ್ನು ನೋಡಿಕೊಳ್ಳುತ್ತಿರುವುದು ನಿಮಗೆಲ್ಲಾ ತಿಳಿದಿದೆ. ಪತ್ನಿ ನನ್ನ ರಾಜಕೀಯ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸುತ್ತಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಲ್ಲಿಗೆ ಪಿಸಿ ಮಾತನಾಡಲು ಬಂದಿದ್ದರು. ನನಗೆ ಪಿಸಿ ಅಮಾನತಾದರೂ ಒಂದೇ, ಅಮಾನತಾಗದಿದ್ದರೂ ಒಂದೇ. ನನಗೆ ನನ್ನ ಚಾಲಕನ ಆರೋಗ್ಯವೇ ಮುಖ್ಯ ಎಂದರು.
**
ಮುಂದುವರಿದ ತನಿಖೆ
ಉಡುಪಿ: ಮಲ್ಪೆ  ಫಿಶ್‌ಮೀಲ್‌ ಸಿಬಂದಿ ಕುಮಾರ್‌ ಅವರ ಮೇಲೆ ಮಲ್ಪೆ ಪೊಲೀಸ್‌ ಕಾನ್ಸ್‌ಟೆಬಲ್‌ ಪ್ರಕಾಶ್‌ ಅವರು ಹಲ್ಲೆ ನಡೆಸಿದ ಪ್ರಕರಣ ಮತ್ತು ಪ್ರಕಾಶ್‌ ಅವರ ಪತ್ನಿ ಜ್ಯೋತಿ ಅವರನ್ನು ಕುಮಾರ್‌ ಚುಡಾಯಿಸಿದ ಪ್ರಕರಣಗಳೆರಡರ ತನಿಖೆ ಮುಂದುವರಿದಿದೆ.

Advertisement

ಕಾನ್‌ಸ್ಟೆಬಲ್‌ ಹಲ್ಲೆ ನಡೆಸಿದ ಪ್ರಕರಣ ಕುರಿತು ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಉಡುಪಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಇದರ ನೇತೃತ್ವ ವಹಿಸಲಿದ್ದಾರೆ. ಜ್ಯೋತಿ ಅವರು ನೀಡಿದ ದೂರಿನಂತೆ ಮಹಿಳಾ ಠಾಣೆ ಎಸ್‌ಐ ತನಿಖೆ ನಡೆಸುತ್ತಿದ್ದಾರೆಂದು ಪೊಲೀಸ್‌ ಉನ್ನತ ಮೂಲಗಳು ತಿಳಿಸಿವೆ.

ತಾನು ಪತ್ನಿಗೆ ಔಷಧ ತರಲೆಂದು ಹೋದಾಗ ಚುಡಾಯಿಸಿದ್ದಕ್ಕೆ ಹಲ್ಲೆ ನಡೆಸಿದೆ ಎಂದು ಪ್ರಕಾಶ್‌ ಹೇಳಿಕೊಂಡಿದ್ದರೆ, ಕುಮಾರ್‌ ಅವರು ತಾನು ಎಟಿಎಂಗೆ ಹಣ ತರುವಾಗ ಏಕಾಏಕಿ ಬಂದು ಹಲ್ಲೆ ನಡೆಸಿದರು ಮತ್ತು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದರು ಎಂದು ದೂರು ನೀಡಿದ್ದಾರೆ. ಪ್ರಕಾಶ್‌ ಪತ್ನಿ ಜ್ಯೋತಿ ಮಹಿಳಾ ಠಾಣೆಗೆ ದೂರು ನೀಡಿದ್ದರು. ಕುಮಾರ್‌ ಆಸ್ಪತ್ರೆಗೆ ದಾಖಲಾಗಿದ್ದು ಪ್ರಕರಣದ ಆಧಾರದಲ್ಲಿ ಎಸ್ಪಿಯವರು ಪ್ರಕಾಶ್‌ ಅವರನ್ನು ಅಮಾನತುಗೊಳಿಸಿರುವುದರಿಂದ ಮತ್ತು ಕುಮಾರ್‌ ಅವರು ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಫಿಶ್‌ಮೀಲ್‌ ಸಿಬಂದಿಯಾದ ಕಾರಣ ಘಟನೆ ಸುದ್ದಿಗೆ ಗ್ರಾಸವಾಗಿ ಎರಡು ದಿನಗಳಿಂದ ಪರವಿರೋಧ ಹೇಳಿಕೆಗಳು ಹರಿದಾಡುತ್ತಿವೆ. ಎರಡೂ ಪ್ರಕರಣ ತನಿಖೆಯಲ್ಲಿದ್ದು ಸೋಮವಾರ ಯಾವುದೇ ಹೊಸ ಬೆಳವಣಿಗೆಗಳು ನಡೆದಿಲ್ಲ.

ಪ್ರಧಾನ ಎರಡು ಪಕ್ಷಗಳು ಘಟನೆಯನ್ನು ಕೇಂದ್ರೀಕರಿಸಿಕೊಂಡು ಕೆಸರೆರಚಾಟದಲ್ಲಿ ತೊಡಗಿವೆ.

Advertisement

Udayavani is now on Telegram. Click here to join our channel and stay updated with the latest news.

Next