Advertisement

ಅತ್ಯಂತ ಸುಂದರ ಬೀಚ್‌ ಆಗಿ ಮಲ್ಪೆ-ಪಡುಕರೆ: ಪ್ರಮೋದ್‌ ಆಶಯ

01:38 PM Jan 01, 2018 | Team Udayavani |

ಮಲ್ಪೆ: ಒಂದೆಡೆ ಭೋರ್ಗರೆಯುವ ಸಮುದ್ರ, ಇನ್ನೊಂದೆಡೆ ಜನಸಾಗರದ ನಡುವೆ ಮಲ್ಪೆ ಕಡಲ ಕಿನಾರೆಯಲ್ಲಿ ಮೂರು ದಿನಗಳ ಕಾಲ ನಡೆದ ಉಡುಪಿ ಪರ್ಬ, ಅಡ್ವೆಂಚರ್‌ ಫೆಸ್ಟಿವಲ್‌ ರವಿವಾರ ಸಮಾಪನಗೊಂಡಿತು.

Advertisement

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮಲ್ಪೆ- ಪಡುಕರೆ ಜಗತ್ತಿನಲ್ಲಿ  ಸುಂದರ, ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ಬೆಳೆಯಬೇಕೆಂಬುದು ನನ್ನ ಹಂಬಲವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಥಮ ಹಂತದಲ್ಲಿ  ಇಲ್ಲಿ  75 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸೀ ವಾಟರ್‌ ನ್ಪೋರ್ಟ್ಸ್ ಅಡ್ವೆಂಚರ್‌ ಸೆಂಟರನ್ನು ಕೂಡ ಸ್ಥಾಪಿಸಲಾಗುವುದು ಎಂದರು.

ಪ್ರವಾಸೋದ್ಯಮದಿಂದಲೇ ಆದಾಯ
ಇಂದು ಅನೇಕ ದೇಶಗಳು ಪ್ರವಾಸೋದ್ಯಮದಿಂದಲೇ ಆದಾಯವನ್ನು ಪಡೆಯುತ್ತಿವೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಪ್ರವಾಸೋದ್ಯಮ ಯಾವ ಮಟ್ಟದಲ್ಲಿ ಬೆಳೆಯ ಬೇಕಿತ್ತೋ ಆ ಮಟ್ಟಕ್ಕೆ ಇನ್ನೂ ಬೆಳೆದಿಲ್ಲ. ಸರಕಾರ ದಿಂದಲೂ ಅದಕ್ಕೆ ಸರಿಯಾದ ಬೆಂಬಲ ಸಿಕ್ಕಿಲ್ಲ. ಇಂದು ಸಾಹಸ ಪ್ರವಾಸೋದ್ಯಮವನ್ನು ಬೆಳೆಸ ಬೇಕೆಂದು ಪ್ರವಾಸೋದ್ಯಮ ಸಚಿವರು ಮತ್ತು ನಾನು ಜಿಲ್ಲಾಧಿಕಾರಿಗಳ ಮುಖೇನ ನಿರ್ಧಾರವನ್ನು ಕೈಗೊಂಡಿ ದ್ದೇವೆ. ಪ್ರವಾಸೋದ್ಯಮ ಇಲಾಖೆಯೂ ನಮ್ಮ ಜತೆ ಕೈಜೋಡಿಸಿದ್ದು, ಬೇರೆ ಬೇರೆ ಕಡೆಗಳಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪ್ರವಾ ಸೋದ್ಯಮದ ಅಂಗವಾಗಿ ಬೆಳೆಸಲು ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದರು. ಸೈಕ್ಲಿಂಗ್‌, ಹಗ್ಗಜಗ್ಗಾಟ, ಫೊಟೋಗ್ರಫಿ, ಸ್ಕೇಟ್‌ ಬೋರ್ಡಿಂಗ್‌ ಸಹಿತ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಚಿವರು ಬಹುಮಾನ ವಿತರಿಸಿದರು.

ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

ಸ್ಪರ್ಧೆಗಳು, ಸಂಗೀತ ಸಂಜೆ
ರವಿವಾರ ಬೆಳಗ್ಗೆ ನಡೆದ ಮಹಿಳೆಯರ ಮತ್ತು ಪುರುಷರ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಒಟ್ಟು 36 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷರು 106 ಕಿ.ಮೀ., ಮಹಿಳೆಯರು 41 ಕಿ.ಮೀ. ದೂರ ಸೈಕ್ಲಿಂಗ್‌ ನಡೆಸಿದರು. ಸ್ಲೇಕ್‌ಲೈನ್‌, ಎಕ್ಸ್‌ಟ್ರೀಮ್‌ ನ್ಪೋರ್ಟ್ಸ್, ಬಿಎಂಎಕ್ಸ್‌, ಸ್ಕೇಟ್‌ ಬೋರ್ಡಿಂಗ್‌, ಜೆಟ್‌ಸ್ಕೈ, ವಿಂಡ್‌ ಸರ್ಫಿಂಗ್‌, ಬನಾನ ರೈಡ್‌, ಕಯಾಕಿಂಗ್‌ ಸಹಿತ ಸಾಹಸ ಕ್ರೀಡೆಗಳು ದಿನವಿಡೀ ನಡೆದವು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ಸರಿಗಮಪ ತಂಡದವರಿಂದ ಸಂಗೀತ ಸಂಜೆ ಪ್ರೇಕ್ಷಕರ ಮನಸೂರೆ ಗೊಂಡಿತು. ಹೊಸ ವರ್ಷ ಆಚರಣೆಯ ಪ್ರಯುಕ್ತ ಮಂತ್ರ ಡಯಾಲ್‌ ವತಿಯಿಂದ ಒಂದು ತಾಸು ಅವಧಿಯ ಸುಡುಮದ್ದು ಪ್ರದರ್ಶನ ನಡೆಯಿತು.

ನಿತ್ಯ ಟ್ರಾಫಿಕ್‌ ಜಾಮ್‌
ಪ್ರತಿನಿತ್ಯ ಟ್ರಾಫಿಕ್‌ ಜಾಮ್‌ ಸಮಸ್ಯೆಯನ್ನು ಎದುರಿಸುತ್ತಿರುವ ಮಲ್ಪೆ ರಸ್ತೆಯಲ್ಲಿ ರವಿವಾರ ಸಂಜೆ ಸಮಸ್ಯೆ ಮತ್ತಷ್ಟು ಉಲ್ಬಣಿಸಿತ್ತು. ಉತ್ಸವದ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವುದು ಕಂಡುಬಂತು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಾಹನ ಪಾರ್ಕಿಂಗ್‌ ಸಮಸ್ಯೆಯೂ ತಲೆದೋರಿತ್ತು.

ಅತ್ತ ನೀಲ ಸಾಗರ… ಇತ್ತ ಜನಸಾಗರ
ಮಲ್ಪೆ ಬೀಚ್‌ನಲ್ಲಿ  ನಡೆದ ಉಡುಪಿ ಪರ್ಬದ ಮೂರು ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ ಜನಸಾಗರವೇ ಸೇರುತ್ತಿತ್ತು. ಶುಕ್ರವಾರ ಆರಂಭ ಗೊಂಡ “ಪರ್ಬ’ ರವಿವಾರದಂದು ಮತ್ತಷ್ಟು ರಂಗನ್ನು ಪಡೆದಿತ್ತು.
ವರ್ಷಾಂತ್ಯ, ವಾರಾಂತ್ಯ ಜತೆಗೆ ಕ್ರಿಸ್ಮಸ್‌ ರಜೆಯ ಕಾರಣ ಉತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮಹಿಳೆಯರು, ಪುರುಷರು, ಮಕ್ಕಳು, ವಯಸ್ಕರು ಸಹಿತ ಜನರು ಪ್ರವಾಹೋಪಾದಿಯಲ್ಲಿ ಆಗಮಿ ಸಿದ್ದರು. ಕಡಲತಡಿಯಲ್ಲಿ ಮರಳು ಕಾಣದಷ್ಟು ಜನಸಾಗರ ಹರಿದು ಬಂದಿತ್ತು.

ಚಿತ್ರ: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next